(ನ್ಯೂಸ್ ಕಡಬ) newskadaba.com ಜು.23: ಚಿಕ್ಕಮಗಳೂರು: ಬಾಲ್ಯ ವಿವಾಹದ ಕುರಿತು ಮಾಹಿತಿ ನೀಡಿದ್ದಕ್ಕೆ ಅಂಗನವಾಡಿ ಶಿಕ್ಷಕಿಯ ಕುಟುಂಬವನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಯರೇಹಳ್ಳಿಯಲ್ಲಿ ನಡೆದಿದೆ.
ಯರೇಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತೇಜಸ್ವಿನಿ ಎಂಬ ಅಂಗನವಾಡಿ ಶಿಕ್ಷಕಿ ಕೆಲ ದಿನಗಳ ಹಿಂದೆ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ವಿವಾಹದ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಗನವಾಡಿ ಶಿಕ್ಷಕಿಯಿಂದಾಗಿ ವಿವಾಹ ನಿಂತು ಹೋಗಿದ್ದಲ್ಲದೆ, ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದ ಪೋಷಕರು ಮತ್ತು ವರನ ವಿರುದ್ಧ ಪ್ರಕರಣ ದಾಖಲಾಗುವಂತಾಗಿದೆ ಎಂದು ಆರೋಪಿಸಿ ಶಿಕ್ಷಕಿ ಹಾಗೂ ಆಕೆಯ ಕುಟುಂಬಸ್ಥರಿಗೆ ಗ್ರಾಮಸ್ಥರು ಪಂಚಾಯತ್ ನಡೆಸಿ ದಂಡ ವಿಧಿಸಿದ್ದಾರೆ. ಅಲ್ಲದೆ, ಸಾಮಾಜಿಕ ಬಹಿಷ್ಕಾರವನ್ನೂ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಅಂಗನವಾಡಿ ಶಿಕ್ಷಕಿ ಹಾಗೂ ಆಕೆಯ ಕುಟುಂಬಸ್ಥರು ಗ್ರಾಮದ ಯಾರೊಂದಿಗೂ ಮಾತನಾಡುವಂತಿಲ್ಲ, ಗ್ರಾಮದಲ್ಲಿರುವ ಯಾವುದೇ ದೇವಾಲಯವನ್ನೂ ಪ್ರವೇಶಿಸುವಂತಿಲ್ಲ ಎಂದು ಬಹಿಷ್ಕಾರ ಹಾಕಿರುವ ಗ್ರಾಮಸ್ಥರು, ಅಂಗನವಾಡಿ ಶಿಕ್ಷಕಿ ಗ್ರಾಮದಲ್ಲಿ ಕೆಲಸ ಮಾಡಬಾರದು, ಆಕೆ ಕೆಲಸಕ್ಕೆ ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ ಗ್ರಾಮದಲ್ಲಿರುವ ಯಾರೊಬ್ಬರೂ ಅಂಗನವಾಡಿ ಶಿಕ್ಷಕಿಯ ಕುಟುಂಬಸ್ಥರೊಂದಿಗೆ ಮಾತನಾಡಬಾರದು. ಮಾತನಾಡಿದರೆ ಅವರಿಗೂ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ












