ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಕುದ್ಮಾರಿನಲ್ಲಿ ಹೆಣದೂರು ಬೀದಿ ನಾಟಕ

(ನ್ಯೂಸ್ ಕಡಬ) newskadaba.com ಸವಣೂರು, ಎ.9. ಯುವ ಸಮುದಾಯ ಮದ್ಯವ್ಯಸನಕ್ಕೆ ಬಲಿಯಾಗದೇ ಗೌರವಯುತ ಬದುಕನ್ನು ಕಟ್ಟಿಕೊಳ್ಳಬೇಕು. ಮದ್ಯಪಾನವು ಆರೋಗ್ಯವನ್ನು ಕೆಡಿಸುವ ಜೊತೆಯಲ್ಲಿ ಇಡೀ ಕುಟುಂಬವನ್ನೇ ಬೀದಿಪಾಲಾಗಿಸುವುದು. ಈ ನಿಟ್ಟಿನಲ್ಲಿ ಸವಣೂರು ಶ್ರವಣರಂಗ ಶಿಕ್ಷಕ ಕಲಾವಿದರು ಜಿಲ್ಲೆಯಾದ್ಯಂತ ಹೆಣದೂರು ಬೀದಿನಾಟಕ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಕೆ. ಭಾಸ್ಕರ ಕೋಡಿಂಬಾಳ ಹೇಳಿದರು.

ಅವರು ಭಾನುವಾರ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಸವಣೂರು ಯುವಕ ಮಂಡಲದ ವತಿಯಿಂದ ಸ್ಕಂದಶ್ರೀ ಯುವಕ ಮಂಡಲ ಕುದ್ಮಾರು ಇದರ ಸಹಕಾರದೊಂದಿಗೆ ಸರಕಾರಿ ಉನ್ನತೀಕರಿಸಿದ ಶಾಲೆ ಕುದ್ಮಾರಿನಲ್ಲಿ ನಡೆದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ, ಸಮಾಜವನ್ನು ಮದ್ಯಮುಕ್ತಗೊಳಿಸುವಲ್ಲಿ ಸಂಪೂರ್ಣವಾಗಿ ಯಶಕಾಣಲು ಸಾಧ್ಯವಾಗದೇ ಹೋದರು, ಮದ್ಯದ ದುಷ್ಪರಿಣಾಮವನ್ನು ಬೀದಿ ನಾಟಕದ ಮೂಲಕ ವ್ಯಕ್ತಪಡಿಸುವುದರಿಂದ ಅನೇಕರು ಮದ್ಯದಿಂದ ದೂರ ಸರಿಯುವ ದೃಢನಿರ್ಧಾರಕ್ಕೆ ಬರಬಹುದೆಂದರು.

Also Read  ಉಡುಪಿಯಲ್ಲಿ ಇಂದು 18 ಮಂದಿಗೆ ಕೊರೋನ ಪಾಸಿಟಿವ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ಒಕ್ಕುಟದ ಅಧ್ಯಕ್ಷ ವೆಂಕಪ್ಪ ಗೌಡ ಅಡೀಲು ಮಾತನಾಡಿ, ಹೆಣದೂರು ನಾಟಕ ತಂಡದ ಕಲಾವಿದರು ಮನೋಜ್ಞ ಅಭಿಯಾನದ ಮೂಲಕ ಸಾಮಾಜಿಕ ಬದಲಾವಣೆಯಲ್ಲಿ ಪ್ರಭಾವ ಬೀರುತ್ತಿದ್ದಾರೆ. 35ನೇ ಪ್ರದರ್ಶನ ಕಾಣುವ ಈ ಬೀದಿನಾಟಕವು ಜಿಲ್ಲೆಯಾದ್ಯಂತ ನಿರಂತರವಾಗಿ ಪ್ರದರ್ಶಗೊಳ್ಳಲಿ ಎಂದು ಅಭಿಪ್ರಾಯಪಟ್ಟರು. ಸವಣೂರು ವಲಯ ಜಾನಜಾಗೃತಿ ವೇದಿಕೆ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಯಂ ಪ್ರೇರಣೆಯಿಂದಲೇ ಕುಡಿತಕ್ಕೆ ಕಡಿವಾಣ ಹಾಕುವಂತಾಗಬೇಕು. ಯುವಕರು ಕುಡಿತಕ್ಕೆ ಬಲಿಯಾಗದೇ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕೆಂದರು. ಕುದ್ಮಾರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಪುಷ್ಪಲತಾ ಪಿ. ಗೌಡ, ಹರೀಶ್ ಕೆರೆನಾರು, ಸುಪ್ರೀತ್ ರೈ ಖಂಡಿಗ ಮಾತನಾಡಿದರು. ಸವಣೂರು ಶ್ರವಣರಂಗದ ಸಂಚಾಲಕ ತಾರಾನಾಥ ಸವಣೂರು, ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ಯತೀಶ್ ಕೆ.ಎಂ. ಸ್ವಾಗತಿಸಿ, ಮಹೇಶ್ ಕೆ. ಸವಣೂರು ನಿರೂಪಿಸಿದರು. ರಾಮಚಂದ್ರ ವಂದಿಸಿದರು.

Also Read  ಬೆಳಂದೂರು ಬಿಜೆಪಿ ವತಿಯಿಂದ ಪಕ್ಷ ಸಂಸ್ಥಾಪನಾ ದಿನಾಚರಣೆ

error: Content is protected !!
Scroll to Top