(ನ್ಯೂಸ್ ಕಡಬ) newskadaba.com ಜು. 02. ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾರನ್ನು ಅಗಲಿದ ಬಳಿಕ ಒಡಲಲ್ಲಿ ಪುಟ್ಟ ಕಂದನನ್ನು ಇಟ್ಟುಕೊಂಡಿರುವ ಮೇಘನಾ ರಾಜ್ ಯಾತನೆ ಅನುಭವಿಸುತ್ತಿದ್ದಾರೆ. ಇತ್ತ ವಿಜಯ ರಾಘವೇಂದ್ರ ಅವರು ಕೂಡಾ ತಮ್ಮ ಪ್ರೀತಿಯ ಮಡದಿ ಸ್ಪಂದನಾರನ್ನು ಕಳೆದುಕೊಂಡು ನೋವು ತಿನ್ನುತ್ತಿದ್ದಾರೆ. ಹೀಗಿರುವಾಗಲೇ ಈ ಇಬ್ಬರು ನಟ-ನಟಿಯರ ಎರಡನೇ ಮದುವೆ ವಿಚಾರವಾಗಿ ಸಾಮಾಜಿಕ ಮೀಡಿಯಾದಲ್ಲಿ ತುಂಬಾ ಚರ್ಚೆಯಾಗುತ್ತಿದೆ.
ಹೌದು, ವಿಜಯ್ ರಾಘವೇಂದ್ರ ಅವರನ್ನು ಮೇಘನಾ ರಾಜ್ ಮದುವೆಯಾಗಲಿದ್ದಾರೆ ಎಂಬ ಊಹಾಪೋಹ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅದಕ್ಕೀಗ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸ್ವತಃ ಮೇಘನಾ ರಾಜ್ ಪ್ರತಿಕ್ರಿಯೆ ಕೊಟ್ಟಿದ್ದು, “ಜನರಿಗೆ ನಾನು ಏನು ಉತ್ತರ ಕೊಟ್ಟಿದ್ದೇನೆ ಎನ್ನುವುದು ಅರ್ಥವಾಗಿಲ್ಲ. ಆದರೂ ಕಮೆಂಟ್ ಹಾಕುತ್ತಿದ್ದಾರೆ. ಇವತ್ತು ನಾನು ಏನಾದರೂ ಉತ್ತರ ಕೊಟ್ಟರೆ ಅದಕ್ಕೂ ಕಮೆಂಟ್ ಹಾಕುತ್ತಾರೆ. ತುಂಬಾ ಕಮೆಂಟ್ ಮಾಡುವವರಿಗೆ ನಾನು ಹೇಳೋಕೆ ಆಗಲ್ಲ. ನಾನು ಏನೂ ಹೇಳ್ತಿಲ್ಲ. ಆದರೆ ಜನ ಎಲ್ಲವನ್ನೂ ಹೇಳುತ್ತಿದ್ದಾರೆ. ಅವರಿಗೆ ಎಷ್ಟು ಖುಷಿಯಾಗುತ್ತೋ ಅಷ್ಟು ಹೇಳಲಿ” ಎಂದು ಹೇಳಿದ್ದಾರೆ.
ಅಂದಹಾಗೆ ಇಷ್ಟಕ್ಕೂ ಕಾರಣವಾಗಿದ್ದು ವಿಜಯ್ ರಾಘವೇಂದ್ರ ಅವರ ಒಂದು ರೀಲ್ಸ್, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವಿಜಯ್ ರಾಘವೇಂದ್ರ ಅವರು ಮೇಘ ಬಂತು ಮೇಘ, ಮೇಘ ಬಂತು ಮೇಘ, ಮೇಘ ನೀಲಿಯ ಮೇಘ, ಮೇಘ ಮಲ್ಹಾರ ಮೇಘ… ಎಂಬ ಹಾಡೊಂದನ್ನ ಹಾಡಿ ಇನ್ಸ್ಟಾಗ್ರಾಂ ಮೂಲಕ ಪೋಸ್ಟ್ ಮಾಡಿದ್ರು. ಇದೀಗ ಇದೇ ವಿಡಿಯೋ ಇಟ್ಟುಕೊಂಡು ಮತ್ತೊಮ್ಮೆ ಕೆಲವರು ಗಾಳಿ ಸುದ್ದಿ ಹರಡುವ ಮೂಲಕ ಚರ್ಚೆ ಶುರು ಮಾಡಿದ್ದಾರೆ
ಈ ಕುರಿತು ಖಾಸಗಿ ಮಾದ್ಯಮವೊಂದು ವಿಜಯರಾಘವೇಂದ್ರ ಅವರಲ್ಲಿ ಮೇಘನರಾಜ್ ಜೊತೆಗೆ ಎರಡನೇ ಮದುವೆಯ ಬಗ್ಗೆ ಕೇಳಿದಾಗ ‘ನಾನು ಮೇಘನಾರಾಜ್ ಅವರಿಗೆ ಸ್ನೇಹಿತ ಅಷ್ಟೇ. ಮದುವೆ ಆಗುವುದು ಸುಳ್ಳು ಸುದ್ದಿ. ನಾನು ಆ ರೀತಿ ಯೋಚನೆ ಮಾಡಲೂ ಸಾಧ್ಯವಿಲ್ಲ’ ಎಂದು ವಿಜಯರಾಘವೇಂದ್ರ ಕಡ್ಡಿಮುರಿದಂತೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.















