(ನ್ಯೂಸ್ ಕಡಬ) newskadaba.com ಮಂಗಳೂರು, ಎ.07. ನಾಲ್ಕು ದಿನಗಳ ಹಿಂದೆ ಬೆಂಗಳೂರು ಮೂಲದ ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೈಯಲು ಬಂದಿರುವುದನ್ನು ತಿಳಿದು ಈ ಮೂವರನ್ನು ಪೋಲಿಸ್ ಇಲಾಖಾಧಿಕಾರಿಗಳಿಗೆ ತಿಳಿಸಿ ರಕ್ಷಿಸಿದ ಕಾರಣಕ್ಕಾಗಿ ಕೊಕ್ಕಡದ ಯುವಕರಿಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ. ರವಿಕಾಂತೇ ಗೌಡರವರು ಶನಿವಾರದಂದು ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಿದರು.
ಎಪ್ರಿಲ್ 04 ರಂದು ಬೆಂಗಳೂರಿನ ರಾಮನಗರ ಮೂಲದ ಶಿವಾಜಿ ರಾವ್ ಎಂಬವರ ಪತ್ನಿ ಚಂದ್ರಕಲಾ ಎಂಬಾಕೆ ಮನೆಯಲ್ಲಿ ಪತಿಯ ಹೆತ್ತವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೈಯುವ ನಿರ್ಧಾರದಿಂದ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಧರ್ಮಸ್ಥಳಕ್ಕೆ ಬರುವ ಬಸ್ಸನ್ನೇರಿದ್ದರು. ಬಸ್ಸಿನಲ್ಲಿ ಅಳುತ್ತಿರುವುದನ್ನು ಗಮನಿಸಿದ ಪಕ್ಕದ ಸೀಟಿನಲ್ಲಿದ್ದ ಕೊಕ್ಕಡದ ಬೋಳದ ಬೈಲು ರಫೀಕ್ ಮತ್ತು ಅಝೀಝ್ ಎಂಬ ಇಬ್ಬರು ಯುವಕರಿಬ್ಬರು ಸಮಯಾವಧಾನತೆಯಿಂದ ಈ ಮಹಿಳೆಯನ್ನು ಸಂತೈಸಿದ್ದಲ್ಲದೆ, ಕೊಕ್ಕಡದ ವಿಜಯಕರ್ನಾಟಕ ವರದಿಗಾರ ಸುಬ್ರಹ್ಮಣ್ಯ ಶಗ್ರಿತ್ತಾಯರ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯವರಿಗೆ ವಿಷಯ ತಿಳಿಸಿದ್ದರು. ಬಸ್ಸು ಧರ್ಮಸ್ಥಳ ತಲುಪುತ್ತಿದ್ದಂತೆ ಎಸ್ಪಿಯವರ ಆದೇಶದಂತೆ ಧರ್ಮಸ್ಥಳ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಅವಿನಾಶ್ ರವರು ಈ ಮೂವರನ್ನು ಪೊಲೀಸ್ ಜೀಪಲ್ಲಿ ಠಾಣೆಗೆ ಕರೆದುಕೊಂಡು ಬಂದು ಮಹಿಳೆಯ ಪತಿಯನ್ನು ಠಾಣೆಗೆ ಕರೆಸಿ ಸಾಂತ್ವನ ಹೇಳಿ ಪತಿಯೊಂದಿಗೆ ಕಳುಹಿಸಲಾಗಿತ್ತು. ಯುವಕರು ತಮ್ಮ ಪ್ರಸಂಗಾವಧಾನತೆಯಿಂದ ಈ ಮೂವರ ಪ್ರಾಣವುಳಿಸಿದ್ದಕ್ಕಾಗಿ ಶನಿವಾರದಂದು ಜಿಲ್ಲಾ ಎಸ್ಪಿಯವರು ಪೊಲೀಸ್ ಇಲಾಖಾ ವತಿಯಿಂದ ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಿದರು.