(ನ್ಯೂಸ್ ಕಡಬ) newskadaba.com ಜೂ. 30. ಕಸದ ಲಾರಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಪ್ರಕರಣ ದಾಖಲಾದ 20 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಅಸ್ಸಾಂ ಮೂಲದ ಸಂಶುದ್ದೀನ್ ಎಂದು ಗುರುತಿಸಲಾಗಿದೆ. ಕೊಲೆಯಾದ ಮಹಿಳೆಯನ್ನು ಪುಷ್ಪಾ ಅಲಿಯಾಸ್ ಆಶಾ ಎಂದು ಗುರುತಿಸಲಾಗಿದೆ. ಹುಳಿಮಾವುವಿನ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಮೃತ ಪುಷ್ಪ ಅಲಿಯಾಸ್ ಆಶಾಗೆ ಈ ಹಿಂದೆ ಮದುವೆಯಾಗಿದ್ದು ಪತಿ ಮೃತಪಟ್ಟಿದ್ದರು. ಇತ್ತ ಆರೋಪಿ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಸಂಶುದ್ದೀನ್ಗೆ ಮದುವೆಯಾಗಿದ್ದು ಅಸ್ಸಾಂನಲ್ಲಿ ಪತ್ನಿ ಮತ್ತು ಮಕ್ಕಳು ನೆಲೆಸಿದ್ದಾರೆ.
ಆದರೆ, ಒಂದೂವರೆ ವರ್ಷದ ಹಿಂದೆ ಸಂಶುದ್ದೀನ್ಗೆ ಅಶಾ ಪರಿಚಯವಾಗಿದ್ದು, ಕಳೆದ 6 ತಿಂಗಳಿನಿಂದ ಇವರಿಬ್ಬರು ಲಿವಿಂಗ್ ಟುಗೆದರ್ನಲ್ಲಿದ್ದರು. ಇವರು ವಾಸವಾಗಿದ್ದ ಮನೆಯ ಮಾಲೀಕ ಹಾಗೂ ಅಕ್ಕಪಕ್ಕದವರಿಗೆ ನಾವು ಗಂಡ-ಹೆಂಡತಿಯೆಂದು ಹೇಳಿಕೊಂಡಿದ್ದರು. ಇವರಿಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಮೊನ್ನೆ ರಾತ್ರಿ ಕೂಡಾ ಇವರಿಬ್ಬರ ಮಧ್ಯೆ ಗಲಾಟೆಯಾಗಿ ಮಿತಿಮೀರಿದ್ದು, ತಾಳ್ಮೆ ಕಳೆದುಕೊಂಡ ಸಂಶುದ್ದೀನ್ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಶವವನ್ನು ಏನು ಮಾಡುವುದೆಂದು ಯೋಚಿಸಿ, ಮೃತದೇಹವನ್ನು ಮೂಟೆಕಟ್ಟಿ ಬೈಕ್ನಲ್ಲಿ ತೆಗೆದುಕೊಂಡು ಹೋಗಿ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಸ್ಟೇಟಿಂಗ್ ಗೌಂಡ್ ಬಳಿಗೆ ಬಂದು ರಸ್ತೆಬದಿ ನಿಲ್ಲಿಸಿದ್ದ ಬಿಬಿಎಂಪಿ ಕಸದ ಲಾರಿಗೆ ಎಸೆದು ಪರಾರಿಯಾಗಿದ್ದನು.
ನಿನ್ನೆ ಬೆಳಗಿನ ಜಾವ ಕಸ ಹಾಕಲು ಬಂದಿದ್ದ ವ್ಯಕ್ತಿಯೊಬ್ಬರು ಮೂಟೆಯನ್ನು ಗಮನಿಸಿ ಕುತೂಹಲದಿಂದ ಬಿಚ್ಚಿ ನೋಡಿದಾಗ ಶವಕಂಡು ಗಾಬರಿಯಾಗಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು ಮೂಟೆ ಪರಿಶೀಲಿಸಿದಾಗ ಮಹಿಳೆಯ ಶವವಿರುವುದು ಕಂಡು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ ಅವರ ನೇತೃತ್ವದ ತಂಡ ಯಶಸ್ವಿಯಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.












