ಭ್ರಷ್ಟಾಚಾರ ಆರೋಪ- ಗಣಿ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ ಅಮಾನತು



(ನ್ಯೂಸ್ ಕಡಬ) newskadaba.com ಜೂ. 22. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ ಅವರನ್ನು ಕರ್ನಾಟಕ ಸರ್ಕಾರ ಜೂನ್ 21 ರಂದು ಅಮಾನತುಗೊಳಿಸಿ ಆದೇಶಿಸಿದೆ.





ಕಳೆದ ಮೇ 28ರಂದು ಭೂ-ಸಂಬಂಧಿತ ವಿಷಯವೊಂದಕ್ಕೆ ಕೃಷ್ಣವೇಣಿ ಅವರು 50,000 ರೂ. ಲಂಚ ಪಡೆಯುತ್ತಿದ್ದ ಸಂದರ್ಭ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದು, ನಂತರ ಸುಮಾರು 18 ದಿನಗಳ ಕಾಲ ಬಂಧನದಲ್ಲಿದ್ದರು. ಈ ಘಟನೆ ನಡೆದ ಕೂಡಲೇ ಇಲಾಖೆ ನಿರ್ದೇಶಕರು ಅವರನ್ನು ಅಮಾನತುಗೊಳಿಸುವಂತೆ ಶಿಫಾರಸ್ಸು ಮಾಡಿದ್ದು, ಆದರೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಜಾಮೀನು ಪಡೆದ ನಂತರ ಅಧಿಕಾರಿ ಅದೇ ಹುದ್ದೆಯಲ್ಲಿ ಮುಂದುವರಿದಿದ್ದರು.






ಆದರೇ ಇದೀಗ ಅವರು ಹುದ್ದೆಯಲ್ಲಿ ಮುಂದುವರಿದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ತಕ್ಷಣವೇ ಅಮಾನತುಗೊಳಿಸಿ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿ ಎಂಬಂತೆ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉಪ ಕಾರ್ಯದರ್ಶಿ ಶನಿವಾರ ಅಮಾನತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳ 68 ರ ಅಡಿಯಲ್ಲಿ ಉಡುಪಿಯ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ.ಯು ಅವರನ್ನು ದಕ್ಷಿಣ ಕನ್ನಡಕ್ಕೆ ಹೊಸ ಉಪನಿರ್ದೇಶಕರಾಗಿ ನೇಮಿಸಲಾಗಿದೆ.

error: Content is protected !!
Scroll to Top