(ನ್ಯೂಸ್ ಕಡಬ) newskadaba.com ಪುತ್ತೂರು, ಎ.06. ಶ್ರೀಮಂತರ ಮನೆ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಐವರನ್ನು ಬಂಧಿಸಿರುವ ಡಿಸಿಐಬಿ ಪೊಲೀಸರು ಕೃತ್ಯಕ್ಕೆ ಬಳಸಲಾಗುವ ಆಯುಧಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ರಾತ್ರಿ ಕುಂಬ್ರದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್. ರವಿಕಾಂತೇಗೌಡರವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್ ವೈ. ನಾಯ್ಕ್ ರವರು ತಮ್ಮ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಮಾಣಿ, ಪುತ್ತೂರು, ಕುಂಬ್ರ ಕಡೆ ಸಂಚರಿಸಿ ಕೊಲ್ಲಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ ಐವರು ಅನುಮಾನಾಸ್ಪದವಾಗಿ ಇದ್ದವರನ್ನು ವಿಚಾರಿಸಲಾಗಿ ಎಲ್ಲರೂ ಬಿಹಾರ ರಾಜ್ಯದವರಾಗಿದ್ದು ಹಿಂದಿ ಭಾಷೆಯಲ್ಲಿ ಮಾತಾಡುತ್ತಿದ್ದವರೆನ್ನಲಾಗಿದೆ. ಅವರನ್ನು ಕೂಲಂಕುಷವಾಗಿ ವಿಚಾರಿಸಿದಾಗ ಶ್ರೀಮಂತರ ಮನೆಯನ್ನು ಗುರುತಿಸಿ ದರೋಡೆ ಮಾಡುವ ಉದ್ದೇಶದಿಂದ ಹೊಂಚುಹಾಕುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ.
ಆರೋಪಿಗಳಾದ ಪ್ರಮೋದ್ ಶರ್ಮ (33), ಅಂಕುಶ್ ರಾಜ್(27), ಟುನ್ ಟುನ್ ಕುಮಾರ್ (24), ಕರಣ್ ಕುಮಾರ್ (19), ಪ್ರಿನ್ಸ್ ಕುಮಾರ್(19) ಎಂಬವರನ್ನು ಬಂಧಿಸಿದ್ದು, ಆರೋಪಿಗಳಿಂದ ಚೂರಿ, ಕಬ್ಬಿಣದ ರಾಡ್, ಉಳಿ, ಸುತ್ತಿಗೆ, ಮೆಣಸಿನ ಹುಡಿ ಪ್ಯಾಕೆಟ್, ಹ್ಯಾಂಡ್ ಗ್ಲೌಸ್ ಮತ್ತು ಪ್ಲಾಸ್ಟರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣವನ್ನು ಮುಂದಿನ ಕ್ರಮದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.