(ನ್ಯೂಸ್ ಕಡಬ) newskadaba.com ಜೂ. 21. ನೀಟ್ ಅಂಕಪಟ್ಟಿಗಾಗಿ ವಿದ್ಯಾರ್ಥಿಯೋರ್ವನಿಂದ ಹಣ ಪಡೆದು ಆನ್ಲೈನ್ ಮೂಲಕ ನಕಲಿ ನೀಟ್ (NEET) ಅಂಕಪಟ್ಟಿ ನೀಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿಯ ಪ್ರಕಾರ, ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಉಡುಪಿಯ ರೋಶನ್ ಶೆಟ್ಟಿ ಎಂಬವರ ಮಗ ರೋನಕ್ ಶೆಟ್ಟಿ ಎಂಬಾತ ಇತ್ತೀಚೆಗೆ ಎನ್.ಟಿ.ಎ. ನಡೆಸಿದ ನೀಟ್ ಪರೀಕ್ಷೆಯನ್ನೂ ಬರೆದಿದ್ದ. ಆದರೆ, ನೀಟ್ ಪರೀಕ್ಷಾ ತಯಾರಿ ವೇಳೆ ಈತ ಎಡಿಟಿಂಗ್ ಮಾಸ್ಟರ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿದ್ದ ರಾಷ್ಟ್ರೀಯ ಮಟ್ಟದ ನೀಟ್, ಜೆಇಇ ಮತ್ತು ಸಿಬಿಎಸ್ಇ ಪರೀಕ್ಷೆಗಳ ಫಲಿತಾಂಶಗಳನ್ನು ರೂಪದಲ್ಲಿ ಬದಲಾಯಿಸುವುದು ಮತ್ತು ನಕಲಿ ಮಾಡುವುದು ಹೇಗೆ ಎಂಬ ವೀಡಿಯೊವನ್ನು ನೋಡಿ ಕೂಡಲೇ ಆತ ಅವರನ್ನು ಸಂಪರ್ಕಿಸಿದ್ದ ಎನ್ನಲಾಗಿದೆ.
ಆಗ ಆ ವ್ಯಕ್ತಿ ತನ್ನನ್ನು ವಿಷ್ಣುಕುಮಾರ್ ಎಂದು ಪರಿಚಯಿಸಿಕೊಂಡಿದ್ದು, ನಂತರ ವಿದ್ಯಾರ್ಥಿಗೆ ನಕಲಿ ನೀಟ್ ಅಂಕ ಪಟ್ಟಿ ಹಾಗೂ ಓಎಂಆರ್ ನೀಡುವುದಾಗಿ ತಿಳಿಸಿ 17 ಸಾವಿರ ರೂ. ವರ್ಗಾಯಿಸಿಕೊಂಡು ಡಿಜಿಟಲ್ ಆಗಿ ನೀಟ್ ಪರೀಕ್ಷೆಯ ನಕಲಿ ಅಂಕ ಪಟ್ಟಿ ಹಾಗೂ ಓಎಂಆರ್ ಶೀಟ್ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದ ಎನ್ನಲಾಗಿದೆ.
ಆರೋಪಿ ನಕಲಿ ದಾಖಲೆ ಸೃಷ್ಟಿಸಿ ವಿದ್ಯಾರ್ಥಿಗೆ ವಂಚಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ರೋಶನ್ ಕುಮಾರ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.












