(ನ್ಯೂಸ್ ಕಡಬ) newskadaba.com ಕಡಬ, ಜೂ. 21. ರಸ್ತೆ ಅಡ್ಡ ದಾಟುತ್ತಿದ್ದ ಹಾವನ್ನು ನೋಡಿ ರಿಕ್ಷಾ ಚಾಲಕನೋರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಚರಂಡಿಗೆ ಬಿದ್ದು ಓರ್ವ ಪ್ರಯಾಣಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಶಾಂತಿಮೊಗರು ಸಮೀಪದ ಕೊಂಡಾಡಿ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಪೆರಾಬೆ ಗ್ರಾಮದ ಸಾಮೆತಡ್ಕ ನಿವಾಸಿ ನಯಾಝ್ ಎಂದು ಗುರುತಿಸಲಾಗಿದೆ. ಆಲಂಕಾರಿನಿಂದ ಶಾಂತಿಮೊಗರು ಕಡೆಗೆ ಮಹಮ್ಮದ್ ಮುಸ್ತಾಫ ಎಂಬವರು ರಿಕ್ಷಾ ಚಲಾಯಿಸಿಕೊಂಡು ಬಂದಿದ್ದು ಕೊಂಡಾಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಹಾವೊಂದು ರಸ್ತೆಯಲ್ಲಿ ಅಡ್ಡ ದಾಟುತ್ತಿದ್ದುದನ್ನು ಕಂಡು ಹಠಾತ್ ಬ್ರೇಕ್ ಹಾಕಿದ್ದಾರೆ.
ಪರಿಣಾಮ ನಿಯಂತ್ರಣ ಕಳೆದುಕೊಂಡ ಆಟೋರಿಕ್ಷಾ ರಸ್ತೆಯ ಬಲ ಬದಿಯಲ್ಲಿನ ಚರಂಡಿಗೆ ಬಿದ್ದಿದೆ ಎನ್ನಲಾಗಿದೆ. ಗಾಯಾಳು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.








