(ನ್ಯೂಸ್ ಕಡಬ) newskadaba.com ಜೂ. 16. ಗುಜರಾತಿನ ಅಹಮದಾಬಾದ್ ವಿಮಾನ ದುರಂತ ನಡೆದ ಬೆನ್ನಲ್ಲೇ ವಿಮಾನಗಳಲ್ಲಿ ಒಂದಲ್ಲ ಒಂದು ಲೋಪದೋಷಗಳು ಕಂಡುಬರುತ್ತಿದ್ದು, ಇದೀಗ ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಕುರಿತು ಮೂಲಗಳು ವರದಿ ಮಾಡಿದೆ.
SV3112 ಸಂಖ್ಯೆಯ ವಿಮಾನ ಜಿದ್ದಾದಿಂದ 250 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ದೋಷ ಉಂಟಾದ ಕೆಲವೇ ಕ್ಷಣಗಳಲ್ಲಿ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದರು. ವಿಮಾನ ಚಕ್ರಗಳು ರನ್‌ವೇ ಗೆ ಇಳಿಯುತ್ತಿದ್ದಂತೆ ಟೈಯರ್‌ನಿಂದ ಬೆಂಕಿ ಕಿಡಿಗಳು ಚಿಮ್ಮಿದ್ದು, ದಟ್ಟ ಹೊಗೆ ಹೊಮ್ಮಿದೆ. ಈ ವೇಳೆ ವಿಮಾನ ನಿಲ್ದಾಣದ ಅಗ್ನಿಶಾಮಕ ಮತ್ತು ರಕ್ಷಣಾ ತಂಡವು ತಕ್ಷಣವೇ ನೆರವಿಗೆ ಧಾವಿಸಿ ಕೇವಲ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸದೇ ನೂರಾರು ಯಾತ್ರಿಕರು, ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.