(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಎ.05. ಮದುವೆಯ ಆಲ್ಬಮ್ ನಿಂದ ಫೋಟೋಗಳನ್ನು ಕದ್ದು ತೆಗೆದು ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಕೇರಳ ಪೊಲೀಸರು ಪ್ರಮುಖ ಆರೋಪಿ ಸಹಿತ ಮೂವರನ್ನು ಬಂಧಿಸಿದ್ದಾರೆ.
ಕ್ಯಾಲಿಕಟ್ ನ ವಡಗರ ಎಂಬಲ್ಲಿನ ಸದ್ಯಂ ಫೋಟೊ ಶೂಟ್ ಆ್ಯಂಡ್ ಎಡಿಟಿಂಗ್ ಸ್ಟುಡಿಯೋದಲ್ಲಿ ಮಹಿಳೆಯರ ಫೋಟೋಗಳನ್ನು ಎಡಿಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಕೆಲವು ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಕುಟುಂಬವೊಂದರ ಮದುವೆಯಲ್ಲಿ ತೆಗೆದ ಫೋಟೋಗಳು ಅಶ್ಲೀಲ ಫೋಟೋಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳ ಬೆಚ್ಚಿ ಬೀಳಿಸುವ ಕೃತ್ಯ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಾಲಕ ದಿನೇಶನ್, ಫೋಟೊಗ್ರಾಫರ್ ಸತೀಶನ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದರು. ಈತನ ಬಂಧನಕ್ಕೆ ಒತ್ತಾಯಿಸಿ ವೈಕಲಶ್ಶೇರಿ ಜನಕೀಯ ಆಕ್ಷನ್ ಕಮಿಟಿ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಪ್ರತಿಭಟನಾ ಜಾಥಾ ನಡೆದಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಮುಖ ಬಿಬಿಶ್ ಕೇರಳವನ್ನು ಬಿಟ್ಟು ತೆರಳುವ ಸಾಧ್ಯತೆಯನ್ನು ಮನಗಂಡ ಪೊಲೀಸರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಈ ನಡುವೆ ಬಿಬಿಶ್ ನನ್ನು ಇಡುಕ್ಕಿಯಲ್ಲಿ ಬಂಧಿಸಿದ್ದಾರೆ.