(ನ್ಯೂಸ್ ಕಡಬ) newskadaba.com ಸುಳ್ಯ, ಎ.04. ಸುಳ್ಯದಿಂದ ತಲಕಾವೇರಿಗೆ ತೊಡಿಕಾನ – ಪಟ್ಟಿ – ಭಾಗ ಮಂಡಲ ಮೂಲಕ ಅತ್ಯಂತ ಹತ್ತಿರದ ಸಂಪರ್ಕ ರಸ್ತೆಯ ಪಟ್ಟಿ ಎಂಬಲ್ಲಿ ಗೇಟ್‌ಗೆ ಹಾಕಲಾಗಿದ್ದ ಬೀಗವನ್ನು ಕೊಡಗು ಅರಣ್ಯ ಇಲಾಖೆಯ ಅಧಿಕಾರಿಗಳು ಕೊನೆಗೂ ತೆರವುಗೊಳಿಸಿದ್ದಾರೆ.
ಪಟ್ಟಿ ಅರಣ್ಯಕ್ಕೆ ಮೇಲಾಧಿಕಾರಿಗಳು ಬಂದಿದ್ದ ಸಂದರ್ಭದಲ್ಲಿ ವಾಹನವೊಂದು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡು, ಗೇಟ್‌ಗೆ ಬೀಗ ಜಡಿಯಬೇಕೆಂದು ಆದೇಶಿದ್ದರು. ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಈ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಕೊಡಬಾರದು. ಅಂಥವರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಸಿಬಂದಿಗೆ ಸೂಚಿಸಿದ್ದರು. ಮೇಲಾಧಿಕಾರಿಗಳ ಸೂಚನೆಯಂತೆ ಕೊಡಗು ಅರಣ್ಯ ಇಲಾಖೆಯ ಸಿಬಂದಿಗಳು ರಸ್ತೆಗೆ ಅಡ್ಡಲಾಗಿ ಸಂಕೋಲೆ ಕಟ್ಟಿ, ಬೀಗ ಜಡಿದು ಪ್ರವಾಸಿಗರ ಮತ್ತು ಭಕ್ತರ ಸಂಚಾರಕ್ಕೆ ತಡೆಯೊಡ್ಡಿದ್ದರು. ಇದರಿಂದ ಸಮಸ್ಯೆ ಎದುರಿಸುತ್ತಿದ್ದ ಸ್ಥಳೀಯರು ಪ್ರತಿಭಟನೆಗೂ ಸಿದ್ಧತೆ ನಡೆಸಿದ್ದರು. ಹದಿನೈದು ವರ್ಷಗಳ ಹಿಂದೆಯೂ ಅರಣ್ಯ ಇಲಾಖೆ ಈ ಗೇಟ್‌ಗೆ ಬೀಗ ಹಾಕಿದ್ದಾಗ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಆ ಬಳಿಕ ಇಲಾಖೆ ಗೇಟ್ ತೆರವುಗೊಳಿಸಿತ್ತು.
ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗೇಟ್‌ನ ಬೀಗ ತೆರವುಗೊಳಿಸಿ, ಹಗಲು ಹೊತ್ತಿನಲ್ಲಿ ಭಕ್ತರ ಮತ್ತು ಪ್ರವಾಸಿಗರ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.