ಮಂಗಳೂರು, ಮೇ.27. ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆಗೈದ ನಂತರ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಕನ್ನಡ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ್ದ ವರದಿಯನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ಅವರು ಮೇ 27 ರಂದು ಆದೇಶ ಹೊರಡಿಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಮೇ 27 ರಂದು ಸಂಜೆ 6.00 ಗಂಟೆಯಿಂದ ಮೇ 30 ರಂದು ಸಂಜೆ 6.00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.