(ನ್ಯೂಸ್ ಕಡಬ) newskadaba.com, ಮೇ.27. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಆಂಧ್ರಪ್ರದೇಶದ ಕೆಎನ್‌ಆರ್ ಕಂಪೆನಿಯ ಬೇಜವಾಬ್ದಾರಿತನದ ಕೆಲಸಗಳಿಂದ ಮಾಣಿ ಸೂರಿಕುಮೇರು ಮಧ್ಯೆ ಹಲವಾರು ಅವಾಂತರಗಳು ಸೃಷ್ಠಿಯಾಗಿದೆ.

ರಾಜ್ ಕಮಲ್ ಹಾಲ್ ಬಳಿ ಮತ್ತು ಟಿಕ್ಕಾ ಪಾಯಿಂಟ್ ಹೋಟೆಲ್ ಸಮೀಪ ಚರಂಡಿಗಳಲ್ಲಿ ತುಂಬಿರುವ ಮಣ್ಣು ತೆಗೆಯದೇ ಇರುವುದರಿಂದ ಮಳೆಯ ನೀರೆಲ್ಲಾ ರಸ್ತೆಯಲ್ಲೇ ತುಂಬಿ ಕೃತಕ ಹೊಳೆ ನಿರ್ಮಾಣವಾಗಿ ವಾಹನ ಸಂಚಾರ ಸುಗಮವಾಗುತ್ತಿಲ್ಲ, ಅದೇ ರೀತಿ ಹಳೀರ ಮಾನಸ ತೆಂಗಿನ ಎಣ್ಣೆಯ ಮಿಲ್ ಸಮೀಪ ಎತ್ತರದಲ್ಲಿ ಇರುವ ಮೂರು ಕರೆಂಟ್ ಕಂಬಗಳು ಅವೈಜ್ಞಾನಿಕ ರೀತಿಯಲ್ಲಿ ವಟ್ರಾಸಿ ತಡೆಗೋಡೆ ಮಾಡಿ ಅದರ ಗ್ಯಾಪ್‌ಗೆ ಮಣ್ಣು ತುಂಬಿಸದೆ ಹಾಗೇ ಬಿಟ್ಟಿರುವುದರಿಂದ ಕರೆಂಟ್ ಕಂಬಗಳಿಗೆ ಆಧಾರ ಸಾಕಾಗದೆ ಕೆಳಗೆ ಉರುಳಿಬೀಳಲು ಕ್ಷಣಗಣನೆ ಮಾಡುತ್ತಿದೆ.
ಮತ್ತು ಹಳೀರದಿಂದ ಪಟ್ಲಕೋಡಿ ಸಂಪರ್ಕದ ರಸ್ತೆಯ ಪ್ರವೇಶ ರಸ್ತೆಯನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ತಾತ್ಕಾಲಿಕವಾಗಿ ರಿಪೇರಿ ಮಾಡಿ ಹೋಗುವುದರಿಂದ ಯಾವುದೇ ವಾಹನಗಳು ಹೋಗದ ಪರಿಸ್ಥಿತಿ ಇದೆ. ಕಾಂಕ್ರೀಟ್ ಅಥವಾ ಡಾಮರು ರಸ್ತೆಗೆ ಹಾಕದೇ ಇರುವುದರಿಂದ ಒಂದೇ ಮಳೆಗೆ ರಸ್ತೆ ಕರಗಿ ಹೋಗುತ್ತವೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಇದೇ ಪರಿಸ್ಥಿತಿಯನ್ನು ಆ ಭಾಗದ ಜನರು ಅನುಭವಿಸುತ್ತಿದ್ದು ರೋಗಿಗಳು, ವಯೋವೃದ್ಧರು, ಮಕ್ಕಳು ಪಡುತ್ತಿರುವ ಸಂಕಷ್ಟಗಳ ಹೊಣೆ ಯಾರು ಹೊರುವುದು? ರಸ್ತೆ ಬದಿ ವಾಹನ ನಿಲ್ಲಿಸಿ ನಡೆದುಕೊಂಡೇ ಹೋಗುವ ಪರಿಸ್ಥಿತಿಯನ್ನು ಮೂರು ವರ್ಷಗಳಲ್ಲಿ ಸರಿ ಮಾಡಲು ಆಗಲಿಲ್ಲವೇ..? ಹಳೀರ ಎಂಬಲ್ಲಿ ಖತೀಜಮ್ಮ ಎಂಬವರ ಮನೆಗೆ ಅರ್ಧ ತಡೆಗೋಡೆ ಮಾಡಿ ಅನ್ಯಾಯ ಮಾಡಲಾಗಿದೆ ಅವರ ಮನೆ ಬೀಳುವ ಹಂತದಲ್ಲಿದೆ.