(ನ್ಯೂಸ್ ಕಡಬ) newskadaba.com ಕಡಬ, ಎ.3. ಸುಬ್ರಹ್ಮಣ್ಯ ಸಮೀಪದ ಬಿಸಿಲೆಘಾಟ್ನ ಅಡ್ಡಹೊಳೆಯಿಂದ ಕೊಳವೆ ಮುಖಾಂತರ ಕಡಬ ಭಾಗಕ್ಕೆ ಕುಡಿಯುವ ನೀರು ತರುವ ಸುಮಾರು 25 ಲಕ್ಷ ರೂ ವೆಚ್ಚದ ಬಹುನಿರೀಕ್ಷಿತ ಮರ್ಧಾಳ ಝರಿ ನೀರು ಕುಡಿಯುವ ನೀರಿನ ಯೋಜನೆ ನೇಪಥ್ಯಕ್ಕೆ ಸರಿದಿದೆ.
ರಾಜ್ಯ ಹೆದ್ದಾರಿ 85 ರ ಬಳಿಯ ಬಿಸಿಲೆಘಾಟ್ನಿಂದ ನೀರು ತಂದು ಕಡಬ ಭಾಗದ ಶೇ 60 ಗ್ರಾಮಗಳಿಗೆ ಭರಪುರ ನೀರುಣಿಸಬಹುದಾದ ಬೃಹತ್ ಯೋಜನೆ ಅನುಷ್ಟಾನಕ್ಕೆ ಕಳೆದ ಎಂಟು ವರ್ಷಗಳಿಂದ ಪಟ್ಟ ಪ್ರಯತ್ನಗಳೆಲ್ಲವೂ ನೀರಿನಲ್ಲಿ ಇಟ್ಟ ಹೋಮದಂತಾಗಿದೆ. ಉದ್ದೇಶಿತ ಯೋಜನೆಯಿಂದ ಒಳಪಡುವ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿ, ವಿದ್ಯುತ್ ಉಳಿತಾಯ, ಪರಿಶುದ್ಧ ಕುಡಿಯುವ ನೀರು ಈ ಎಲ್ಲಾ ಕನಸುಗಳಿಗೆ ಪುರಕ ವಾತಾವರಣ ಒದಗಿ ಬರಲೇ ಇಲ್ಲ. ಕುಕ್ಕೇ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಿಂದ 13 ಕಿಲೋ ಮೀಟರ್ ದೂರ ಹಾಸನ ಜಿಲ್ಲೆಯ ಎತ್ತೂರು ಹೋಬಳಿಯ ಅಡ್ಡಹೊಳೆಯಿಂದ ಸಮುದ್ರ ಮಟ್ಟದಿಂದ 360.54 ಮೀಟರ್ ಎತ್ತರದಲ್ಲಿರುವ ಈ ಹಳ್ಳದಲ್ಲಿ ಭರಪುರಾ ನೀರಿದೆ, ಈ ತೊರೆಯಲ್ಲಿ ಎಪ್ರಿಲ್ ಮೇ ತಿಂಗಳ ಬಿರುಬೇಸಿಗೆಯಲ್ಲು ಆಳೆತ್ತರದ ನೀರು ಹರಿದು ಹೋಗುತ್ತಿದೆ. ಇಲ್ಲಿ ಭೂಮಿಗೆ ನೀರು ಸಮಾನಾಂತರವಾಗಿ ಹರಿದು ಬಂದು ಬಳಿಕ ದುಮ್ಮಿಕ್ಕಿ ಕೆಳಗೆ ಹರಿಯುತ್ತದೆ. ಮುಖ್ಯವಾಗಿ ಇಲ್ಲಿ ಯಾವುದೇ ಅಣೆಕಟ್ಟು ನಿರ್ಮಾಣ ಮಾಡಬೇಕಾದ ಅವಶ್ಯಕತೆಯಿಲ್ಲ. ಇದೇ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯ ಸೇತುವೆಯೊಂದಿದ್ದು. ಇಲ್ಲಿ ಸಮತಟ್ಟಾದ ಜಾಗವಿದೆ, ಅದೇ ಸ್ಥಳದಲ್ಲಿ ನೀರು ಶುದ್ಧೀಕರಣ ಘಟನ ನಿರ್ಮಾಣಕ್ಕೆ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ರಕ್ಷಿತಾರಣ್ಯದಲ್ಲಿ ಸುಮಾರು ಎರಡುವರೆ ಎಕರೆ ಸಮತಟ್ಟು ಪ್ರದೇಶ ಘಟಕ ಸ್ಥಾಪನೆಗೆ ಯೋಗ್ಯವಾದ ಸ್ಥಳವಾಗಿದೆ. ಹಳ್ಳಕ್ಕೆ ಹರಿದು ಹೋಗುವ ಒಂದಂಶ ನೀರನ್ನು ಪೈಪು ಮೂಲಕ ನೇರವಾಗಿ ಹಾಯಿಸುವುದಾದರೆ ಅಮೃತ ಸಮಾನ ಕುಡಿಯುವ ನೀರು ದಕ್ಕಲಿದೆ. ಮಾತ್ರವಲ್ಲ ಸಮೀಕ್ಷೆ ಪ್ರಕಾರ ಪ್ರಕೃತಿಗೆ ಯಾವುದೆ ತರದ ಹಾನಿ ಮಾಡದೆ, ಪ್ರಾಣಿ ಪಕ್ಷಿಗಳಿಗೆ ತೊಂದರೆ ಮಾಡದೆ, ಮರಗಿಡಗಳನ್ನು ಹಾಳುಗೆಡವದೆ ರಸ್ತೆ ಬದಿಯಲ್ಲೇ ಪೈಪು ಲೈನ್ ಹಾಕಿ ಉದ್ದೇಶಿತ ಗ್ರಾಮಗಳಾದ ಬಿಳಿನೆಲೆ, ಕೊಂಬಾರು, ಐತ್ತೂರು, ಮರ್ಧಾಳ, ಕಡಬ, ನೂಜಿಬಾಳ್ತಿಲ, ಕುಟ್ರುಪ್ಪಾಡಿ, ಕುಂತೂರು-ಪೆರಾಬೆ, ಆಲಂಕಾರು, ರಾಮಕುಂಜ ಹಾಗೂ ಕೊೖಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಕುಡಿಯುವ ನೀರುಣಿಸುವ ಒಂದು ಅದ್ಭುತ ಕಲ್ಪನೆ ಈ ಯೋಜನೆ ಎಳ್ಳು ನೀರು ಬಿಡಲಾಗಿದೆ.
ಈ ಹಿಂದೆ ಇದಕ್ಕೆ 25 ಲಕ್ಷ ರೂ ಅಂದಾಜುಪಟ್ಟಿ ತಯಾರಿಸಿ ನಿರಾವರಿ ಇಲಾಖಗೆ ಕಳುಹಿಸಿಕೊಡಲಾಗಿದೆ. ಆದರೆ ಈಗ ಈ ಯೋಜನೆ ಏನಿಲ್ಲವೆಂದರೂ ಕೋಟಿ ರೂ. ಮಿಕ್ಕುವ ಸಾಧ್ಯತೆಯಿದೆ. ಈ ಯೋಜನೆಯ ನೀರು ಎಷ್ಟೊಂದು ಸುಲಲಿತವಾಗಿ ಉದ್ದೇಶಿತ ಗ್ರಾಮಗಳಿಗೆ ತಲುಪಬಹುದು ಎನ್ನುವುದಕ್ಕೆ ಸಮುದ್ರ ಮಟ್ಟದಿಂದ ಇರುವ ಎತ್ತರವೇ ಪುರಕವಾಗಿದೆ. ಅಡ್ಡಹೊಳೆ ಪ್ರದೇಶ ಸಮುದ್ರಮಟ್ಟದಿಂದ 360.54 ಮೀಟರ್ ಎತ್ತರದಲ್ಲಿದ್ದರೆ. ಉಳಿದಂತೆ ಬಿಸಿಲೆ ಗಡಿ ಪ್ರದೇಶ 124.16 ಮೀಟರ್, ಕುಲ್ಕುಂದ 106.50 ಮೀಟರ್, ಕೈಕಂಬ 96.61 ಮೀಟರ್, ಬಿಳಿನೆಲೆ 98.86 ಮೀಟರ್, ನೆಟ್ಟಣ 84.14 ಮೀಟರ್, ಐತ್ತೂರು 101.48 ಮೀಟರ್, ಮರ್ಧಾಳ 100.15 ಮೀಟರ್, ಕಡಬ 96. 37 ಮೀಟರ್, ಹೊರಮಠ ಸೇತುವೆ 58.24 ಮೀಟರ್, ಇಚ್ಲಂಪಾಡಿ ಸೇತುವೆ 99.85 ಮೀಟರ್ ಹಾಗೂ ಬೆಳಂದೂರು, ರಾಮಕುಂಜ, ನೆಲ್ಯಾಡಿ, ಗೋಳಿತೊಟ್ಟು ಪ್ರದೇಶಗಳು ಕೂಡಾ ತೊರೆಯ ಭಾಗದಿಂದ ಸರಾಸರಿ 200 ಮೀಟರ್ ಕೆಳಗೆ ಇದೆ. ಯಾವುದೇ ಅಡತಡೆಗಳಿಲ್ಲದೆ ನೀರು ಸರಾಗವಾಗಿ ಹಾದು ಬರಲಿದೆ ಯಾವುದೇ ವಿದ್ಯುತ್ ಶಕ್ತಿಯ ಅವಶ್ಯಕತೆ ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಈ ಯೋಜನೆಯ ಫಲಾನುಭವಿಗಳು ಎಂದು ಪರಿಗಣಿಸಲಾದ ಗ್ರಾಮಗಳಲ್ಲಿ ಅಂತರ್ಜಲ ಕೊರತೆ, ವಿದ್ಯುತ್ ಅಭಾವ, ಮುಂತಾದ ಸಮಸ್ಯೆಗಳಿಂದಾಗಿ ಜನ ಕುಡಿಯವ ಹಾಗೂ ನಿತ್ಯ ಬಳಕೆಯ ನೀರಿಗೆ ಸದಾ ಪರದಾಡುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಈ ಗ್ರಾಮಗಳಲ್ಲಿ 120 ಕ್ಕೂ ಅಧಿಕ ಕೊಳವೆ ಬಾವಿಗಳಿಗೆ 600 ಅಶ್ವ ಶಕ್ತಿಯಗಿಂತಲೂ ಹೆಚ್ಚು ವಿದ್ಯುತ್ ಬಳಕೆ ಮಾಡಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ವಾರ್ಷಿಕ 30 ಲಕ್ಷ ಕ್ಕೂ ಅಧಿಕ ಹಣ ಪಂಚಾಯಿತಿಗಳಿಗೆ ಹೊರೆಯಾಗುತ್ತಿದೆ. ರೂ ಹನ್ನೆರಡು ಲಕ್ಷಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ವೇತನ, ದುರಸ್ತಿಗಾಗಿ ರೂ 15 ಲಕ್ಷ ಕ್ಕೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಇಷ್ಟಾದರೂ ಇದರಿಂದ 16 ರಿಂದ 18 ಸಾವಿರ ಜನರಿಗೆ ಮಾತ್ರ ಕುಡಿಯುವ ನೀರು ಒದಗಿ ಬರುತ್ತದೆ. ಮಾತ್ರವಲ್ಲದೆ 120 ಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಕೈಪಂಪು ಅಳವಡಿಸಿ ನೀರು ಬಳಕೆ ಮಾಡುಲಾಗುತ್ತಿದೆ. ಇಷ್ಟಾದರೂ ಬಿರು ಬೇಸಿಗೆಯಲ್ಲಿ ಮೇಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುವುದಿಲ್ಲ ಎನ್ನುವುದೇ ವಿಶೇಷ. ಇಷ್ಟೆಲ್ಲಾ ಸಮಸ್ಯೆಗಳಿಗೆ ಮರ್ಧಾಳ ಝರಿ ನೀರು ಯೋಜನೆ ಪರಿಹಾರವಾಗಲಿದೆ. ವರ್ಷಪೂರ್ತಿ, ದಿನದ 24 ಗಂಟೆಯೂ ನೈಸರ್ಗಿಕ ಶುದ್ಧ ಖನಿಜಮುಕ್ತ ನೀರು, ವಿದ್ಯುತ್ ಉಳಿಕೆಗೆ ಸಹಕಾರಿಯಾಗಿದೆ. ಕಾನೂನು ಬಾಹಿರವಾಗಿ ಕೊಳವೆ ಬಾವಿ ಕೊರೆಸುವದು ಕೂಡಾ ಕಡಿಮೆಯಾಗಲಿದೆ. ಅಂತರ್ಜಲದ ವೃದ್ಧಿಗೆ ಪುರಕವಾಗಿರುವ ಈ ಝರಿ ನೀರು ಯೋಜನೆಗೆ ಕಳೆದ ಎಂಟು ವರ್ಷಗಳಿಂದ ಅಧ್ಯಯನ ನಡೆಸಿ ಈ ಹಿಂದೆ ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ವಿಜಯ ಪ್ರಕಾಶ್ ನಿರ್ದೆಶನದಂತೆ ಕರಡು ಪ್ರತಿಯನ್ನು ತಯಾರಿಸಲಾಗಿತ್ತು. ಆ ಸಂದರ್ಭದಲ್ಲಿ ಪುತ್ತೂರು ತಾಲೂಕು ಪಂಚಾಯಿತಿ ಸಭೆಯಲ್ಲಿ ಇದೇ ಝರಿ ನೀರು ಯೋಜನೆ ಭಾರೀ ಸದ್ದು ಮಾಡಿತ್ತು. ಬಳಿಕ ಬಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಈ ಯೋಜನೆಗೆ ಯೋಚನಾ ಲಹರಿಯನ್ನು ಹರಿಯಬಿಟ್ಟರು. ಅವರ ಸೂಚನೆಯಂತೆ ಸಹಕಾರಿ ನೆಲೆಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ನಿರ್ಧರಿಸಲಾಗಿತ್ತು. ಈ ಸಂಬಂಧ ಸರ್ವೆಯನ್ನೂ ಮಾಡಲಾಗಿತ್ತು. ಯೋಜನೆಯ ಅನುಷ್ಟಾನ ಸಮಿತಿಯ ಸಂಚಾಲಕ ಎ.ಪಿ.ಚೆರಿಯನ್ ಅವರ ನೇತೃತ್ವದಲ್ಲಿ ಯೋಜನೆಗೆ ಚಾಲನೆ ನೀಡುವುದಾಗಿ ನಿರ್ಧರಿಸಿ ಕಡಬ ದುರ್ಗಾಂಬಿಕಾ ದೇವಳದ ಸಭಾಂಗಣದಲ್ಲಿ ಸಾರ್ವಜನಿಕರ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಭೆಯಲ್ಲಿ ಪರವಿರೋಧ ವ್ಯಕ್ತವಾಗಿ ಕೊನೆಗೆ ಸಹಕಾರಿ ನೆಲೆಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಸಹಕಾರಿ ಸಂಸ್ಥೆಗೆ ಪಾಲು ಬಂಡವಾಳ ಸಂಗ್ರಹದ ವಿಚಾರ ಬಂದಾಗ ನಿರೀಕ್ಷಿತ ಸಹಕಾರ ವ್ಯಕ್ತವಾಗಲಿಲ್ಲ. ಅಲ್ಲಿಗೆ ಯೋಜನೆ ಕೈಗೂಡುವ ಕನಸು ಮಂಕಾಯಿತು. ಅಲ್ಲಿಂದ ಈಚೆಗೆ ಯೋಜನೆ ವಿಚಾರದಲ್ಲಿ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಸ್ಥೆ ತೋರದೆ ಯೋಜನೆ ನೆನೆಗುದಿಗೆ ಬಿದ್ದಿದೆ.
ಇದೊಂದು ಅದ್ಭುತ ಯೋಜನೆ, ಇದನ್ನು ಸಮರ್ಪಕವಾಗಿ ಅನುಷ್ಟಾನ ಮಾಡಿದರೆ ಯೋಜನೆಯಲ್ಲಿ ಒಳಪಡುಬಹುದಾದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಹತೇಕ ಬಗೆಹರಿಯಲಿದೆ. ಮುಂದಿನ 20 ವರ್ಷಗಳ ನೀರಿನ ಸಮಸ್ಯೆಗೆ ಪರಿಹಾರವಾಗಬಲ್ಲ ಯೋಜನೆಯನ್ನು ಅನುಷ್ಟಾನ ಮಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಇಚ್ಚಾಶಕ್ತಿಯನ್ನು ತೋರಬೇಕಾಗಿದೆ. ಇದೀಗ ಚುನಾವಣೆ ಘೋಷಣೆಯಾಗಿರುವುದರಿಂದ ಚುನಾವಣೆ ಮುಗಿದ ಬಳಿಕ ಮತ್ತೊಮ್ಮೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು.