ಕುಂದಾಪುರ: ಬಾವಿಗೆ ಹಾರಿ ಆತ್ಮಹತ್ಯೆ ಯತ್ನ: ರಕ್ಷಿಸಲು ತೆರಳಿದ್ದ ಮಗ ಮೃತ್ಯು, ತಾಯಿ ಗಂಭೀರ

(ನ್ಯೂಸ್ ಕಡಬ) newskadaba.com , ಮೇ.15. ಕುಂದಾಪುರ: ಸಾಲಬಾಧೆಯಿಂದ ತತ್ತರಿಸಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ಮಗ ಕೂಡಾ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಗುರುವಾರ ಬೆಳಗ್ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ನಡೆದಿದೆ. ಈ ಮಧ್ಯೆ ತಂದೆ-ಮಗ ಬಾವಿಗೆ ಹಾರಿದ್ದನ್ನು ಗಮನಿಸಿ ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮೃತರನ್ನು ಮಾಧವ ದೇವಾಡಿಗ (55), ಅವರ ಪುತ್ರ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ಪ್ರಸಾದ್ ರ ತಾಯಿ ತಾರಾ ದೇವಾಡಿಗರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪಕ್ಕದ ಮನೆಯ ಮಹಿಳೆ ರಂಗೋಲಿ ಹಾಕಲೆಂದು ಮನೆಯಿಂದ ಹೊರಗಡೆ ಬಂದಾಗ ಮನೆಯ ಎದುರುಗಡೆ ಮನೆಯ ಬಾವಿಯಲ್ಲಿ ಕಿರುಚಾಟದ ಶಬ್ದ ಕೇಳಿಬಂತೆಬನ್ನಲಾಗಿದೆ. ಈ ವೇಳೆ ಅವರು ಬಾವಿಯಲ್ಲಿ ಇಣುಕಿ ನೋಡಿದಾಗ ತಾರಾ ದೇವಾಡಿಗ ಬಾವಿಯಲ್ಲಿ ಒದ್ದಾಡುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ಅವರು ಬೊಬ್ಬೆ ಹಾಕಿ ಅಕ್ಕ ಪಕ್ಕದವರನ್ನು ಕರೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಬಾವಿಗಿಳಿದು ತಾರಾ ಅವರನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಗಂಭೀರಾವಸ್ಥೆಯಲ್ಲಿರುವ ತಾರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಬಾವಿಯಿಂದ ಮೇಲಕ್ಕೆತ್ತಿದರು.

error: Content is protected !!
Scroll to Top