(ನ್ಯೂಸ್ ಕಡಬ) newskadaba.com , ಮೇ.15. ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ವೈದ್ಯರು ಮತ್ತು ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಯೋಜನೆಯಡಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ವೇತನವನ್ನು ಪರಿಷ್ಕರಿಸಲಾಗಿದೆ. ಈ ವೇತನ ಹೆಚ್ಚಳ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ. ಈಗಿರುವ ಸಿಬ್ಬಂದಿಗೆ ಇದೇ ವೇತನ ಮುಂದುವರೆಯಲಿದೆ. ಅವರು ಕೂಡ ಹೊಸ ವೇತನಕ್ಕೆ ಅರ್ಹರಾಗಬೇಕಾದರೆ, ಈಗಿರುವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪುನಃ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದಾಗ ಈಗಾಗಲೇ ಕೆಲಸ ಮಾಡಿದ ವೈದ್ಯರಿಗೆ ಹೊಸ ಹುದ್ದೆಗಳನ್ನು ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು 9,041 ಹುದ್ದೆಗಳಿವೆ. ಇದರಲ್ಲಿ 1,398 ಎಂಬಿಬಿಎಸ್ ವೈದ್ಯರು, 899 ತಜ್ಞ ವೈದ್ಯರು ಹಾಗೂ 936 ಸ್ಟಾಫ್ ನರ್ಸ್‌ಗಳ ಹುದ್ದೆಗಳಿವೆ. ಇದರಲ್ಲಿ ಪ್ರಸ್ತುತವಾಗಿ 579 ಎಂಬಿಬಿಎಸ್ ವೈದ್ಯರು, 305 ತಜ್ಞ ವೈದ್ಯರು ಹಾಗೂ 936 ಸ್ಟಾಫ್ ನರ್ಸ್ ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.