(ನ್ಯೂಸ್ ಕಡಬ) newskadaba.com , ಮೇ.13. ಶ್ರೀನಗರ: ಏ. 22 ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆ ಜೋರಾಗಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗಾಗಿ ಶೋಧ ಮತ್ತಷ್ಟು ಹೆಚ್ಚಾಗಿದೆ. ಮಂಗಳವಾರ ಶೋಪಿಯಾನ್‌ನ ಜಿನ್‌ಪಥರ್ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಒಬ್ಬ ಲಷ್ಕರ್-ಎ-ತೈಬಾ ಭಯೋತ್ಪಾದಕ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ. ಇತರ ಇಬ್ಬರು ಲಷ್ಕರ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದೆ.

ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಕೈವಾಡವಿದೆ ಎಂದು ನಂಬಲಾದ ಮೂವರು ಪಾಕಿಸ್ತಾನಿ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಅವರ ‘ಭಯೋತ್ಪಾದಕ ಮುಕ್ತ ಕಾಶ್ಮೀರ’ ಪೋಸ್ಟರ್‌ಗಳನ್ನು ಭದ್ರತಾ ಸಂಸ್ಥೆಗಳು ಹಾಕಿದ ಕೆಲವೇ ಕ್ಷಣಗಳ ನಂತರ ಈ ಬೆಳವಣಿಗೆ ನಡೆದಿದೆ .