(ನ್ಯೂಸ್ ಕಡಬ) newskadaba.com , ಮೇ.13. ಆಂಧ್ರಪ್ರದೇಶದ ಗ್ರಾಮ ಪಂಚಾಯತಿ ವ್ಯಾಪ್ತಿಯೊಳಗಿನ ಸೈನಿಕರ ಒಡೆತನದ ಮನೆಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಡಿಸಿಎಂ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಈ ಹಿಂದೆ ನಿವೃತ್ತ ಸೈನಿಕರು ಅಥವಾ ಗಡಿಗಳಲ್ಲಿ ನಿಯೋಜನೆಗೊಂಡವರಿಗೆ ಸೀಮಿತವಾಗಿತ್ತು. ಇನ್ನು ಮುಂದೆ ಈ ವಿನಾಯಿತಿಯು ದೇಶದ ಯಾವುದೇ ಭಾಗದಲ್ಲಿ ನಿಯೋಜನೆಗೊಂಡ ಎಲ್ಲಾ ಸಕ್ರಿಯ ಸಿಬ್ಬಂದಿಗೂ ಅನ್ವಯವಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ನಿರ್ಧಾರವು ಸೇನೆ, ನೌಕಾಪಡೆ, ವಾಯುಪಡೆ, ಸಿಆರ್ಪಿಎಫ್ ಮತ್ತು ಅರೆಸೈನಿಕ ಪಡೆಗಳಿಗೆ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ರಾಷ್ಟ್ರಕ್ಕಾಗಿ ಅವರ ಸೇವೆ ಅಮೂಲ್ಯವಾದುದ್ದು. ಸಿಬ್ಬಂದಿ ಅಥವಾ ಅವರ ಸಂಗಾತಿ ವಾಸಿಸುವ ಅಥವಾ ಜಂಟಿಯಾಗಿ ಹೊಂದಿರುವ ಆಸ್ತಿ ಮೇಲಿನ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ. ‘ಸೈನಿಕ ಕಲ್ಯಾಣ ನಿರ್ದೇಶಕರ ಶಿಫಾರಸಿನ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ರಾಷ್ಟ್ರದ ರಕ್ಷಕರಿಗೆ ಆಂಧ್ರದ ಗೌರವ ಮತ್ತು ಕೃತಜ್ಞತೆಯನ್ನು ಎತ್ತಿತೋರಿಸುತ್ತದೆ’ ಎಂದು ತಿಳಿಸಿದ್ದಾರೆ.