(ನ್ಯೂಸ್ ಕಡಬ) newskadaba.com, ಮೇ.09: ಸುಹಾಸ್ ಹತ್ಯೆ ಪ್ರಕರಣದ ಎನ್‍ಐಎ ತನಿಖೆ ಆಗಬೇಕು. ಈ ವಿಷಯದಲ್ಲಿ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಆಗ್ರಹಿಸಿ ಆದೇಶ ಮಾಡಿಸಲು ವಿನಂತಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಹಾಸ್ ಹತ್ಯೆ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಯ ನಿರೀಕ್ಷೆ ಹುಸಿಯಾಗಿದೆ. ಆದ್ದರಿಂದ ನಮ್ಮೆಲ್ಲ ಜನಪ್ರತಿನಿಧಿಗಳು, ಸುಹಾಸ್ ಮನೆಯವರು, ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರಕರಣದಲ್ಲಿ ವಿದೇಶಿ ಹಣದ ಹರಿವಿನ ಚರ್ಚೆ ನಡೆಯುತ್ತಿದೆ. ಪಿಎಫ್‍ಐ ನಂಟು ಕೂಡ ಕಾಣುತ್ತಿದೆ ಎಂದರು. ಸುಹಾಸ್ ಹತ್ಯೆ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಮಂಗಳೂರು ಚಲೋ ಮಾಡಲು ತೀರ್ಮಾನ ಮಾಡಿದ್ದೆವು. ‘ಆಪರೇಷನ್ ಸಿಂಧೂರ್’ ಪ್ರಾರಂಭವಾದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಮತ್ತು ದೇಶದ ಜೊತೆ ನಿಲ್ಲಬೇಕೆಂದು ಹಾಗೇ ಇದ್ದೆವು. ಆದರೆ, ಸುಹಾಸ್ ಹತ್ಯೆ ಆದ ನಂತರದಲ್ಲಿ ನಡೆಯುತ್ತಿರುವ ತನಿಖೆಯು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ಟೀಕಿಸಿದರು.