(ನ್ಯೂಸ್ ಕಡಬ) newskadaba.com ಎ. 28 ರಾಯಚೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆ ದೇಶಾದ್ಯಂತ ಜನಸಂದಣಿ ಹೆಚ್ಚಾಗಿರುವ ಪ್ರಮುಖ ಸ್ಥಳಗಳು, ಪುಣ್ಯಕ್ಷೇತ್ರಗಳು ಹಾಗೂ ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಮೂಲಕ ತಪಾಸಣೆ ನಡೆಸಿದ್ದಾರೆ.


ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವುದರಿಂದ ರಾಘವೇಂದ್ರ ಸ್ವಾಮಿ ಮಠ ಹಾಗೂ ಮಂತ್ರಾಲಯದಲ್ಲಿ ತೀವ್ರ ತಪಾಸಣೆ ಮಾಡಲಾಗಿದೆ. ಮಠದ ಪ್ರಾಂಗಣ, ಭೋಜನ ಶಾಲೆ, ತುಂಗಭದ್ರಾ ನದಿ ತೀರ, ಬಸ್ ನಿಲ್ದಾಣ, ವ್ಯಾಪಾರದ ಮಳಿಗೆಗಳು, ವಸತಿಗೃಹಗಳು, ಮಂತ್ರಾಲಯಕ್ಕೆ ಬರುವ ಬಸ್ ,ಕಾರುಗಳಲ್ಲಿ ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್‌ನಿಂದ ತಪಾಸಣೆ ಮಾಡಲಾಗಿದೆ. ಭಕ್ತರ ಬ್ಯಾಗ್‌ಗಳನ್ನೂ ಪರಿಶೀಲನೆ ಮಾಡಲಾಗಿದೆ.
ಮಂತ್ರಾಲಯ ಮಠಕ್ಕೆ ಸಾವಿರಾರು ಭಕ್ತರು ಬರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ಮೂಲಕ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗಿದೆ. ಭದ್ರತೆ ಬಿಗಿಗೊಳಿಸಲು ಮಂತ್ರಾಲಯ ಮಠದ ಆಡಳಿತ ಮಂಡಳಿಗೂ ಪೊಲೀಸರು ಸೂಚನೆ ನೀಡಿದ್ದಾರೆ. ಮಂತ್ರಾಲಯಂ ಹಾಗೂ ಮಾಧವರಂ ಠಾಣೆ ಪೊಲೀಸರಿಂದ ತಪಾಸಣೆ ನಡೆದಿದೆ.