(ನ್ಯೂಸ್ ಕಡಬ) newskadaba.com ಪುತ್ತೂರು, ಎ.01. ವ್ಯಾಗನರ್ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಯುವ ವಕೀಲೆ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯದಲ್ಲಿ ಶನಿವಾರದಂದು ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಕಂಟ್ರಮಜಲು ನಿವಾಸಿ ಜಿನ್ನಪ್ಪ ಗೌಡ ಎಂಬವರ ಪುತ್ರಿ ಮಂಗಳೂರಿನ ಯುವ ವಕೀಲೆ ಗಾಯತ್ರಿ (23) ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನಿಂದ ಕುಂಬ್ರ ಕಡೆಗೆ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಇವರಿದ್ದ ಕಾರು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಗಾಯತ್ರಿ ಹಾಗೂ ಸಂಬಂಧಿ ಯೋಗೀಶ್ ರವರನ್ನು ಪುತ್ತೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಗಾಯತ್ರಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.