ರೈಲ್ವೆ ಪರೀಕ್ಷೆಯಲ್ಲಿ ತಾಳಿ, ಜನಿವಾರ ತೆಗೆಸದಿರಲು ಸಚಿವ ವಿ. ಸೋಮಣ್ಣ ಸೂಚನೆ

(ನ್ಯೂಸ್ ಕಡಬ) newskadaba.com ಎ. 28 ಮಂಗಳೂರು: ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಜನಿವಾರ ಮತ್ತು ಮಂಗಳಸೂತ್ರ ತೆಗೆಸಬಾರದು ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು ತೆಗೆದು ಬರಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಿಇಟಿ ಪರೀಕ್ಷೆಯಲ್ಲಿ ಉಂಟಾದ ಜನಿವಾರ ವಿವಾದದಿಂದಾಗಿ ಇದಕ್ಕೆ ಇನ್ನಷ್ಟು ಕಾವು ಬಂದಿತ್ತು.

ರೈಲ್ವೆ ಮಂಡಳಿಯ ಸೂಚನೆಯಿಂದಾಗಿ ಉಂಟಾಗಿರುವ ಉದ್ವಿಗ್ನತೆಯನ್ನು ದಕ್ಷಿಣ ಕನ್ನಡ ಬಿಜೆಪಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರೈಲ್ವೆ ಇಲಾಖೆ ಸಚಿವರ ಗಮನಕ್ಕೆ ತಂದಿದ್ದರು. ‘ಭಾರತೀಯ ರೈಲ್ವೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ಬರೆಯುವವರು ಮಂಗಳಸೂತ್ರ, ಜನಿವಾರದಂತಹ ಧಾರ್ಮಿಕ ಸಂಕೇತಗಳು ಮತ್ತು ಆಭರಣಗಳನ್ನು ತೆಗೆಯುವಂತೆ ಮಾಡಬಾರದು. ಜನಿವಾರ, ಮಂಗಳಸೂತ್ರ ತೆಗೆಸದಂತೆ ಅಧಿಕಾರಿಗಳಿಗೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸೂಚನೆ ನೀಡಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಮಂಗಳಸೂತ್ರ ಹಾಗೂ ಧಾರ್ಮಿಕ ಸಂಕೇತಗಳನ್ನು ತೆಗೆಯಬೇಕೆಂದು ಹಾಲ್ ​ಟಿಕೆಟ್​ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಬಗ್ಗೆ ನಾವು ಅವರ ಗಮನಕ್ಕೆ ತಂದಿದ್ದೆವು. ಅವರು ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಎಕ್ಸ್​ ಸಂದೇಶದ ಮೂಲಕ ಬ್ರಿಜೇಶ್ ಚೌಟ ಸ್ಪಷ್ಟಪಡಿಸಿದ್ದಾರೆ.

error: Content is protected !!
Scroll to Top