(ನ್ಯೂಸ್ ಕಡಬ) newskadaba.com , ಏ.03 ಚಿಕ್ಕಬಳ್ಳಾಪುರ: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಮೂವರು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸಸಾಗರ ಜಲಾಶಯದಲ್ಲಿ ನಡೆದಿದೆ. ಮೃತರನ್ನು ಚಿಕ್ಕಬಳ್ಳಾಪುರ ನಿವಾಸಿಗಳಾದ ಫರೀನಾ ಬೇಗಂ , ಬಶೀರ್ ಮತ್ತು ಬೆಂಗಳೂರಿನ ಮುನಿರೆಡ್ಡಿಪಾಳ್ಯ ನಿವಾಸಿ ಇಮ್ರಾನ್ ಎಂದು ಗುರುತಿಸಲಾಗಿದೆ. ನೀರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ಮೂವರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಮಗುವನ್ನು ರಕ್ಷಿಸಲಾಗಿದ್ದು ನೀರಿನಲ್ಲಿ ಮುಳುಗಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಫರೀನಾ ಬೇಗಂ ಮತ್ತು ಸಂಬಂಧಿಕರು ರಜೆಯ ಕಾರಣ ಮೊದಲಿಗೆ ನಂದಿಬೆಟ್ಟಕ್ಕೆ ತೆರಳಲು ಮುಂದಾಗಿದ್ದರು. ಆದರೆ ನಂದಿಬೆಟ್ಟ ಬಂದ್ ಆಗಿದ್ದರಿಂದ ಜಲಾಶಯಕ್ಕೆ ಭೇಟಿ ನೀಡಿದ್ದರು. ಜಲಾಶಯದ ಬಂಡೆಯ ಮೇಲೆ ಕುಳಿತು ಊಟ ಮಾಡುತ್ತಿದ್ದ ವೇಳೆ ಮಗುವೊಂದು ಜಾರಿ ನೀರಿಗೆ ಬಿದ್ದಿದೆ. ಅದನ್ನು ರಕ್ಷಿಸಲು ಹೋದಾಗ ದುರ್ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.