(ನ್ಯೂಸ್ ಕಡಬ) newskadaba.com , ಏ.02: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಿತ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಿದ್ದು, ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ತೀವ್ರ ವಾಕ್ಸಮರ ನಡೆಯುವ ಸಾಧ್ಯತೆಯಿದೆ. ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯ ಲೋಕಸಭೆ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಈ ಮಸೂದೆ ಕುರಿತು ಚರ್ಚಿಸಲು ಎಂಟು ಗಂಟೆಗಳ ಸಮಯಾವಕಾಶವನ್ನು ಮೀಸಲಿಟ್ಟಿದೆ.

ಬಿಎಸಿ ಸಭೆ ನಡೆಯುತ್ತಿರುವ ಸಮಯದಲ್ಲಿಯೂ ವಿಪಕ್ಷಗಳು ಸಭಾತ್ಯಾಗ ಮಾಡಿದ್ದು, ಸರ್ಕಾರ ತಮ್ಮ ಧ್ವನಿಯನ್ನು ಹತ್ತಿಕ್ಕಲು ಹೊರಟಿದೆ ಎಂದು ಆರೋಪಿಸಿದೆ. “ತಮ್ಮ ಧ್ವನಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಮಣಿಪುರದ ಪರಿಸ್ಥಿತಿ ಮತ್ತು ಮತದಾರರ ಫೋಟೋ ಗುರುತಿನ ಚೀಟಿಗಳ ಮೇಲಿನ ವಿವಾದ ಸೇರಿದಂತೆ ಹೆಚ್ಚಿನ ವಿಷಯಗಳನ್ನು ಚರ್ಚಿಸಲು ಮತ್ತು ದೇಶದಲ್ಲಿ ನಡೆಯುತ್ತಿರುವ ಪ್ರಮುಖ ಘಟನೆಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ವಿರೋಧ ಪಕ್ಷಗಳು ಹೆಚ್ಚಿನ ಸಮಯವನ್ನು ಬಯಸುತ್ತಿವೆ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಅವರು ಹೇಳಿದರು.