(ನ್ಯೂಸ್ ಕಡಬ) newskadaba.com ಕಡಬ,ಮಾ.31. ಕುಂತೂರು ಗ್ರಾಮದ ಪೆರಾಬೆ ಬೀರಂತಡ್ಕ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ರಾಜನ್ ದೈವಸ್ಥಾನದಲ್ಲಿ ಎ.24ರಿಂದ ಎ.27ರವರೆಗೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಹಾಗೂ ರಾಜನ್ ದೈವ(ಶಿರಾಡಿ ದೈವ)ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಕಾರ್ಯಕ್ರಮಗಳು ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಬೈಪಡಿತ್ತಾಯ ಮತ್ತು ಶ್ರೀ ಕೃಷ್ಣಪ್ರಸಾದ್ ಉಪಾಧ್ಯಾಯ ಅರ್ಬಿ ರವರ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದ್ದು ಜೀಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ.
ಶ್ರೀಕ್ಷೇತ್ರದ ಪರಿಚಯ
‘ಬೀರಂತಡ್ಕ’ ಹೆಸರೇ ಸೂಚಿಸುವಂತೆ ವೀರರ ಬಯಲು ಮತ್ತು ಈ ಪ್ರದೇಶಕ್ಕೆ ಐದು ಶತಮಾನಗಳ ಹಿಂದೆ ವಿಜಯನಗರ ಅರಸರ ಸೇನಾ ನಾಯಕರು, ಭಟರು ಬಂದು ನೆಲೆಸಿದ್ದು ಇಂದಿಗೆ ಇತಿಹಾಸ. ಯುದ್ಧವನ್ನು ಬಿಟ್ಟು ಕೃಷಿ ಕಾಯಕಕ್ಕೆ ತೊಡಗಿದ ‘ನಾಯಕ’ (ಈಗ ಪರಿವಾರ ಬಂಟ) ಜನಾಂಗದವರು ‘ಬೀರಂತಡ್ಕ’ವನ್ನು ನೆಲೆಯೆಂದು ಸ್ವೀಕರಿಸಿದರು.ಪುತ್ತೂರು ತಾಲೂಕಿನ ಕುಂತೂರು ಗ್ರಾಮದಲ್ಲಿ ಕುಮಾರಧಾರ ಮತ್ತು ಗುಂಡ್ಯ ಹೊಳೆಗಳು ಸಂಗಮಿಸುವ ವಿಶಿಷ್ಟ ಪುಣ್ಯಕ್ಷೇತ್ರ ಬೀರಂತಡ್ಕದ ಕೂಡಿಗೆ. ಉತ್ತರದಲ್ಲಿ ಯಕ್ಷಪ್ರಶ್ನೆಯ ಸರೋವರ (ಕೆದ್ದೋಟೆ ಕೆರೆ) ಇಲ್ಲೇ ಸಮೀಪದಲ್ಲಿದೆ. ಪಶ್ಚಿಮದಲ್ಲಿ ಜಲ ಕನ್ನಿಕೆಯರ ವಿಶಿಷ್ಟ ಕಾರಣಿಕ ಸ್ಥಳ ‘ಉರುಂಬಿ’ ಸಮೀಪದಲ್ಲಿ ಇದೆ. ‘ಬಲ್ಲಳಿಕೆ’ ಎಂಬ ಸ್ಥಳವೂ ಇದ್ದು, ಅರಸರ ಆಳ್ವಿಕೆಯ ಒಂದು ಕೇಂದ್ರ ಸ್ಥಾನವಿದ್ದಿರಬಹುದೆಂಬ ಊಹೆಗೂ ಕಾರಣವಾಗುತ್ತದೆ. ಬೀರಂತಡ್ಕದಲ್ಲಿ ಒಂದು ಸುಂದರವಾದ ಬಲಮುರಿ ಗಣಪತಿ ದೇವಸ್ಥಾನ ಇರುವುದು ವಿಶೇಷವಾಗಿದೆ. ಮತ್ತು ಸಂಶೋಧಕರ ಕಣ್ಣಿಗೆ ಬಿದ್ದಂತಿಲ್ಲ. ನಾಯಕ ಮನೆತನದವರು ಮೂಲತಃ ಆರಾಧಿಸಿಕೊಂಡು ಬರುತ್ತಿರುವ ಈ ಕ್ಷೇತ್ರಕ್ಕೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಹಾಗೂ ಪರಊರಿನ ಭಕ್ತರು ಹರಕೆ, ಸೇವೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.ಪಕ್ಕದಲ್ಲೇ ರಾಜನ್ ದೈವ (ರಾಜನ್ ದೈವ) ಪರಿವಾರ ದೈವಗಳು ನೆಲೆಯಾಗಿದೆ. ದೇವಸ್ಥಾನದಲ್ಲಿರುವ ‘ನಂದಿ’ಯ ವಿಗ್ರಹವು ಇಲ್ಲಿ ಪ್ರಾಚೀನ ಕಾಲದಲ್ಲಿ ಈಶ್ವರ ಆರಾಧನೆ ನಡೆಯತ್ತಿದ್ದಿರಬಹುದೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ‘ಪಂಜುರ್ಲಿ’ ಈ ದೇಗುಲದ ಅಸುಪಾಸಿನ ಪರಿಸರದ ನೈಋತ್ಯ, ವಾಯವ್ಯ, ಈಶಾನ್ಯ, ಆಗ್ನೇಯ ದಿಕ್ಕುಗಳಲ್ಲಿ ನೆಲೆಯಾಗಿ ಕ್ಷೇತ್ರರಕ್ಷಕವೆನಿಸಿದೆ. ಪಶ್ಚಿಮದಲ್ಲಿ ‘ಆಟಿ ಗುಳಿಗ’ ನೆಲೆಸಿದ್ದಾನೆ. ಸುಮಾರು ಎರಡು ಕಿ.ಮೀ ದೂರದಲ್ಲಿ ‘ಪಂಜುರ್ಲಿ’ ಸ್ವರೂಪದ ‘ಮಲರಾಯ’ ಎಂಬ ದೈವವೂ ನೆಲೆಸಿ, ನಾಯಕ ಮನೆತನದ ನೇತೃತ್ವದಲ್ಲಿ ಊರಪರವೂರ ಭಕ್ತರಿಂದ ಹರಕೆ, ಪರ್ವಗಳನ್ನು ಸ್ವೀಕರಿಸುತ್ತಾ ಬಂದಿರುವುದು ಈ ಕ್ಷೇತ್ರದ ವಿಶೇಷ. ಗಣಪತಿ ದೇಗುಲವಿದ್ದ ಕಡೆ ಹಿಂದೆ ಬೃಹತ್ ದೇಗುಲವಿದ್ದುದಾಗಿಯೂ ಎರಡು ತಲೆಮಾರಿನ ಹಿಂದೆ ಬಿದ್ದು ಹೋದ ಆ ಕಟ್ಟಡದ ಬದಲಿಗೆ ಶ್ರೀ ಗಣಪತಿಗೂ ರಾಜನ್ ದೈವ ಪರಿವಾರ ದೈವಗಳಿಗೆ ಪ್ರತ್ಯೇಕ ಎರಡು ದೇಗುಳಗಳು ನಿರ್ಮಾಣ ಮಾಡಿದ್ದಾಗಿಯೂ ತಿಳಿದುಬಂದಿದೆ. ಸುತ್ತಲೂ ಬಿಲ್ವಪತ್ರೆ ಮರಗಳಿಂದ ಶೋಭಿಸುವ ಈ ಕ್ಷೇತ್ರದ ಪೂರ್ವ ಭಾಗದಲ್ಲಿ ಪವಿತ್ರ ಪುಷ್ಕರಿಣಿಯೊಂದಿದೆ.
ಶ್ರೀ ಕ್ಷೇತ್ರದ ಅರ್ಚಕರಾಗಿ ಶ್ರೀ ಕೃಷ್ಣಪ್ರಸಾದ ಉಪಾಧ್ಯಾಯ ಅರ್ಬಿ ಇವರು ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇವರ ಮನೆತನದವರೇ ಹಲವು ತಲೆಮಾರಿನಿಂದ ಅರ್ಚಕರಾಗಿದ್ದು ವಿಶೇಷವಾಗಿದೆ. ಕಾರ್ತಲ್ (ತುಳು) ತಿಂಗಳಲ್ಲಿ ವಾರಕ್ಕೆ ಮೊದಲು ಗೊನೆ ಕಡಿದು ಆಸುರ ಮತ್ತು ದೈವ ಕ್ರಿಯೆಯಲ್ಲಿ ಪರ್ವ ನಡೆಯುತ್ತದೆ. ತದನಂತರ ಶ್ರೀ ರಾಜನ್ ದೈವ ಪರಿವಾರ ದೈವಗಳಿಗೆ ದೈವಸ್ಥಾನದಲ್ಲಿ ತಂಬಿಲ ನಡೆಯುತ್ತದೆ. ಬಳಿಕ ವಿವಿಧ ದಿಕ್ಕುಗಳಲ್ಲಿರುವ ‘ಪಂಜುರ್ಲಿ’ ದೈವಕ್ಕೆ ಕಾಯಿ ಒಡೆದು, ಅಸುರ ವಿಧಾನದಲ್ಲಿ ಸೇವೆ ನಡೆಯುತ್ತದೆ. ದೀಪಾವಳಿಯ ಹೊತ್ತಿಗೆ ವಾರಕ್ಕೆ ಮೊದಲು ಗೊನೆ ಕಡಿದು ಬಲಿಯೇಂದ್ರ ಮರಹಾಕಿ, ಕೃಷಿ ಉಪಕರಣಗಳನ್ನು ಇಟ್ಟು ಗಣಪತಿಗೆ ನೈವೇದ್ಯ ಇಟ್ಟು , ವಿಶೇಷ ಹೋಮ, ಚೌತಿ ಪೂಜೆ, ನೆರವೇರುತ್ತದೆ. ಇದೇ ದಿನ ಶ್ರೀ ದೇವರಿಗೆ ಹೊಸ್ತಾರೋಗುಣ (ಪುದ್ವರಿದ ಒಣಸ್) ನಡೆಯುತ್ತದೆ. ಅದೇ ರೀತಿ ರಾಜನ್ ದೈವ ಪರಿವಾರ ದೈವಗಳಿಗೆ ಅರಳು, ತೆಂಗಿನಕಾಯಿ, ಬಾಳೆಹಣ್ಣು, ಬೆಲ್ಲ, ವೀಳ್ಯ ಇತ್ಯಾದಿಗಳನ್ನು ಬಡಿಸುವ ಪದ್ಧತಿಯೂ ನಡೆದು ಬಂದಿದೆ. ಬಳಿಕೆ ಬಲಿಯೇಂದ್ರ ಪೂಜೆ, ತುಳಸಿ ಪೂಜೆ ಮತ್ತು ಗೋ ಪೂಜೆ ನಡೆಯುತ್ತದೆ. ಪರ್ವಕಾಲಗಳಲ್ಲಿ ಹಸುಕರುಗಳನ್ನು ದೈವ ದೇವರಿಗೆ ಹರಕೆ ರೂಪದಲ್ಲಿ ಒಪ್ಪಿಸುವುದು ಇತಿಹಾಸವಾಗಿದೆ.
ಕಾಲ ಘಟ್ಟದಲ್ಲಿ ನಾಯಕ ಮನೆತನದ ಹಿರಿಯರಾದ ಶ್ರೀ ರಾಮಣ್ಣ ನಾಕ್ ಮತ್ತು ನಂತರದ ತಲೆಮಾರಿನ ಶ್ರೀ ರಾಮಣ್ಣ ನಾಕ್ ಮತ್ತು ಶ್ರೀ ಬಾಬು ನಾಕ್ ಮತ್ತು ಶ್ರೀ ಸದಾಶಿವ ನಾಕ್ ಹಾಗೂ ಸಹೋದರರ ಮುಂದಾಳತ್ವ ಮತ್ತು ಊರ ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಯಾವುದೇ ಕ್ರಿಯಾಲೋಪ ಬಾರದಂತೆ ದೈವ ದೇವರುಗಳ ಪರ್ವಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಕ್ಷೇತ್ರ ಜೀರ್ಣೋದ್ಧಾರ ಕಾರ್ಯ ಮಾಡಿ ಸಾನಿಧ್ಯವೃದ್ಧಿ ಮಾಡಬೇಕೆಂಬ ಸದುದ್ದೇಶದೊಂದಿಗೆ ನಾವು ದೇವರ ಸಾನಿಧ್ಯದಲ್ಲಿ ದೈವಜ್ಞ ಪುತ್ತೂರು ಕೊಳಚ್ಚಪ್ಪೆ ಶ್ರೀ ಕೆ. ವಿಶ್ವನಾಥ ಭಟ್ಟರಲ್ಲಿ ಪ್ರಶ್ನೆ ನಡೆಸಿ ಅವರ ಸೂಚನೆಯ ಪ್ರಕಾರ ವಿವಿಧ ಪರಿವಾರ ಕಾರ್ಯಗಳನ್ನು ನಡೆಸಲು ಹಾಗೂ ಕ್ಷೇತ್ರದ ನೈಋತ್ಯ ಖಂಡದಲ್ಲಿ ಪುರ್ವಾಭಿಮುಖವಾಗಿ ನೂತನ ದೇವಾಲಯ ರಚನೆಯಾಗಬೇಕಾಗಿದೆ. ದೇಗುಲದ ದಕ್ಷಿಣಕ್ಕೆ ಉತ್ತರಾಭಿಮುಖವಾಗಿ ದೈವಾಲಯ ನಿರ್ಮಾಣ ಮತ್ತು ವಾಯುವ್ಯದಲ್ಲಿ ಗುಳಿಗನಿಗೆ ಶಿಲಾಪ್ರತಿಷ್ಠೆಯಾಗಬೇಕೆಂದು ನಿರ್ದೇಶಿಸಿರುತ್ತಾರೆ.
ದೈವಜ್ಞರ ಸೂಕ್ಷ್ಮ ಚಿಂತನೆಯ ಪ್ರಕಾರ ‘ದೇವ ಸಂಬಂಧಿಗಳಿಗೆ’ ಕಷ್ಟಸೂಚಕವಾಗಿದೆ. ಕ್ಷೇತ್ರಸಾನಿಧ್ಯ ಉಪಾಧಿ ಜೀರ್ಣವಾಗಿದ್ದು. ವಾಲ್ಮೀಕ(ಹುತ್ತ) ಆವರಿಸಿರುವುದರಿಂದ ಸಾನಿಧ್ಯವು ಕ್ಷಯವಾಗಿ ಪೂಜಾರ್ಹತೆ ನಷ್ಟವಾಗಿರುವುದರಿಂದ ವಿವಿಧ ಪ್ರಾಯಶ್ಚತ್ತ ಕರ್ಮಗಳನ್ನು ಮಾಡಿ ಜೀಣೋದ್ಧಾರ ಕಾರ್ಯ ಮಾಡಬೇಕಾಗಿದೆ. ಪ್ರತಿಷ್ಠೆಯ ಅನಂತರದಲ್ಲಿ ಪಂಚಪರ್ವಗಳನ್ನು ನಡೆಸಿಕೊಂಡು ಬರಬೇಕಾಗಿದೆ. ಮುಂದಿನ ಕಾರ್ಯಕ್ರಮಗಳನ್ನು ಜ್ಯೋತಿಷಿ ಕೊಳಚ್ಚಪ್ಪೆ ಶ್ರೀ ವಿಶ್ವನಾಥ ಭಟ್, ವಾಸ್ತುತಜ್ಞ ತಂತ್ರಿಗಳಾದ ಶ್ರೀ ಕೃಷ್ಣರಾಜ್ ಭಟ್ ಕುಡುಪು, ಪುನರ್ಪ್ರತಿಷ್ಠಾ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಬೈಪಡಿತ್ತಾಯ ಕೆಂಚಭಟ್ರೆ ಮತ್ತು ಪ್ರಧಾನ ಅರ್ಚಕರಾದ ಶ್ರೀ ಕೃಷ್ಣಪ್ರಸಾದ್ ಉಪಾಧ್ಯಾಯ ಅರ್ಬಿ ಅವರ ನೇತೃತ್ವದಲ್ಲಿ ನೆರವೇರಲಿದೆ.