(ನ್ಯೂಸ್ ಕಡಬ) newskadaba.com ಮಾ. 21 ಪುತ್ತೂರು: ಜೀವನದಿಯಾಗಿರುವ ನೇತ್ರಾವತಿಯ ಕಿನಾರೆಯ ಉಪ್ಪಿನಂಗಡಿಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರ ನೇತೃತ್ವದಲ್ಲಿ ೩೯ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ‘ಉಬಾರ್ ಕಂಬಳೋತ್ಸವ’ ಮಾರ್ಚ್ ೨೨ ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಅವರು ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೨೪ ಗಂಟೆಯ ಮಿತಿಯೊಳಗೆ ಈ ಬಾರಿ ಕಂಬಳೋತ್ಸವವನ್ನು ಮುಗಿಸುವ ಚಿಂತನೆ ಸಮಿತಿಗಿದೆ. ಈ ಬಾರಿ ೧೫೦ ಜತೆ ಕೋಣಗಳು ಕಂಬಳ ಕೂಟದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಒಟ್ಟು ೬ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು. ಕನೆ ಹಲಗೆ ವಿಭಾಗ ಹೊರತು ಪಡಿಸಿ ಉಳಿದ ೫ ವಿಭಾಗಗಳಲ್ಲಿ ಸೆಮಿಫೈನಲ್ ಬಂದ ಕೋಣಗಳಿಗೂ ತೃತೀಯ ಹಾಗೂ ಚರ್ತುರ್ಥ ಬಹುಮಾನ ನೀಡುವ ಚಿಂತನೆ ನಡೆಸಲಾಗಿದೆ. ವಿಜೇತ ಕೋಣಗಳ ರಕ್ಷಕರಿಗೂ ‘ವಿಜಯರಕ್ಷಕ’ ಗೌರವ ನೀಡಲಾಗುವುದು ಎಂದು ಅವರು ತಿಳಿಸಿದರು.
ಉಬಾರ್ ಕಂಬಳೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಸಸ್ಯಮೇಳ, ಆಹಾರಮೇಳ, ಮಕ್ಕಳಿಗಾಗಿ ಜಾಯಿಂಟ್ ವೀಲ್, ಬೋಟಿಂಗ್ ಮತ್ತಿತರ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದವರು ಮಾಹಿತಿ ನೀಡಿದರು.

ಮಾರ್ಚ್ ೨೩ರಂದು ಬೆಳಿಗ್ಗೆ ೧೦ ಗಂಟೆಗೆ ಕಂಬಳೋತ್ಸವಕ್ಕೆ ಜಾಲನೆ ದೊರೆಯಲಿದೆ. ಅದಕ್ಕೂ ಮೊದಲು ಕಂಬಳಕೋಣಗಳ ಮೆರವಣಿಗೆ ನಡೆಯಲಿದೆ. ಕಂಬಳಕೂಟದಲ್ಲಿ ನೇಗಿಲು ಹಿರಿಯ, ನೇಗಿಲು ಕಿರಿಯ, ಹಗ್ಗ ಹಿರಿಯ, ಹಗ್ಗ ಕಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ವಿಭಾಗಗಳಿವೆ. ಪ್ರತೀ ವಿಭಾಗದ ಪ್ರಥಮ ಸ್ಥಾನಿ ವಿಜೇತ ಕೋಣಗಳಿಗೆ ಒಂದೂವರೆ ಪವನ್ ಚಿನ್ನ ಹಾಗೂ ದ್ವಿತೀಯ ಸ್ಥಾನಿ ವಿಜೇತ ಕೋಣಗಳಿಗೆ ೧ ಪವನ್ ಚಿನ್ನ ಹಾಗೂ ವಿಜಯವಿಕ್ರಮ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದವರು ತಿಳಿಸಿದರು.