(ನ್ಯೂಸ್ ಕಡಬ) newskadaba.com ಮಾ. 20 ಶಿವಮೊಗ್ಗ: ರಾಜ್ಯದ ಎಲ್ಲಾ ಸಮುದಾಯಗಳಿಗೆ ಶೇ.75 ರಷ್ಟು ಮೀಸಲಾತಿ ನೀಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ರಾಜ್ಯ ಸರ್ಕಾರಕ್ಕೆ ಬುಧವಾರ ಒತ್ತಾಯಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠಾ ಸೇವಾ ಸಂಘ ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಮರಾಠಾ ಸಮುದಾಯದ ವೆಬ್‌ಸೈಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಹಿಂದ ಸಮುದಾಯಕ್ಕೆ ನೆರೆ ರಾಜ್ಯ ತಮಿಳುನಾಡಿನಲ್ಲ ಶೇ.65ರಷ್ಟು ಮೀಸಲಾತಿ ಇದೆ. ಅಂತೆಯೇ ನಮ್ಮ ರಾಜ್ಯದಲ್ಲಿಯೂ ಶೋಷಿತ ವರ್ಗಗಳು ಮತ್ತು ಅಹಿಂದ ವರ್ಗಗಳ ಎಲ್ಲಾ ಹಿಂದುಳಿದ ಸಮುದಾಯಗಳು ಅಭಿವೃದ್ಧಿಯಾಗಬೇಕು. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ವರ್ಗದವರಿಗೆ ಶೇ.75ರಷ್ಟು ಮೀಸಲಾತಿ ನೀಡಬೇಕು ಎಂದು ಹೇಳಿದರು.
2ಎ ಅಡಿಯಲ್ಲಿ ಮೀಸಲಾತಿ ನೀಡುವಂತೆ ಹಲವು ಸಮುದಾಯಗಳು ಬೇಡಿಕೆ ಇಡುತ್ತಿವೆ. ಹೀಗಾಗಿ ಮೀಸಲಾತಿಯಲ್ಲಿ ಶೇಕಡಾವಾರು ಹೆಚ್ಚಳವಾಗಬೇಕು. ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒದಗಿಸಬೇಕು. ತಮಿಳುನಾಡು 9ನೇ ತಿದ್ದುಪಡಿ ಮಾಡಿಕೊಂಡು ಮೀಸಲಾತಿ ಹೆಚ್ಚಿಸಿದೆ. ನಮ್ಮ ರಾಜ್ಯದಲ್ಲಿಯೂ ಎಲ್ಲಾ ಶೋಷಿತ ವರ್ಗಗಳು ಅಭಿವೃದ್ಧಿಯಾಗಬೇಕೆಂದರೆ ರಾಜ್ಯ ಸರ್ಕಾರದ ವತಿಯಿಂದ ಶೇ.75 ರಷ್ಟು ಮೀಸಲಾತಿ ಘೋಷಿಸಿ, ನಮ್ಮಲ್ಲೂ ಅಂತಹ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದರು.