(ನ್ಯೂಸ್ ಕಡಬ) newskadaba.com ಸವಣೂರು, ಮಾ.30. ಪಾಲ್ತಾಡಿ ಗ್ರಾಮದ ಮಂಜುನಾಥನಗರ(ಅಂಕತ್ತಡ್ಕ) ದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ವರದಿಯಾಗಿದೆ.
ಆರೋಗ್ಯ ಕೇಂದ್ರದ ಮುಂಭಾಗದ ಕಿಟಕಿಯ ಗಾಜನ್ನು ಕಿಡಿಗೇಡಿಗಳು ಕೈಯಿಂದ ಗುದ್ದಿ ಹಾನಿ ಮಾಡಿದ್ದು, ಸ್ಥಳದಲ್ಲಿ ರಕ್ತದ ಕಲೆ ಕಾಣಿಸಿಕೊಂಡಿದ್ದು ಈ ಕುರಿತು ಬೆಳ್ಳಾರೆ ಪೋಲೀಸ್ ಠಾಣೆಗೆ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ರೈ ಅವರು ದೂರು ನೀಡಿದ್ದಾರೆ.
ಯಾವ ಉದ್ದೇಶಕ್ಕಾಗಿ ಗಾಜು ಒಡೆದಿದ್ದಾರೆ ಎಂಬುದು ಪೋಲೀಸ್ ತನಿಖೆಯಿಂದ ತಿಳಿಯಬೇಕಿದೆ. ಮುಖ್ಯ ರಸ್ತೆಯಿಂದ ದೂರವಿರುವ ಈ ಆರೋಗ್ಯ ಕೇಂದ್ರಕ್ಕೆ ಯಾವುದೋ ದುಷ್ಕೃತ್ಯ ನಡೆಸಲು ಬಂದಿರುವ ಸಾಧ್ಯತೆ ಕಂಡುಬರುತ್ತಿದೆ. ಅಲ್ಲದೆ ಆರೋಗ್ಯ ಕೇಂದ್ರದ ಆವರಣದ ಹೊರಗಡೆ ಇರುವ ಮೋರಿಯ ಬಳಿಯಲ್ಲಿ ಮದ್ಯದ ಬಾಟಲಿಗಳು ಕಾಣುತ್ತಿದ್ದು, ರಾತ್ರಿ ವೇಳೆ ಇಲ್ಲಿ ಅಕ್ರಮ ಚಟುವಟಿಕೆ ನಡೆಯುತಿರುವ ಕುರಿತು ಗುಮಾನಿ ವ್ಯಕ್ತವಾಗಿದೆ.
ಬಂಬಿಲ – ಮಂಜುನಾಥನಗರ ಮುಖ್ಯ ರಸ್ತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿರುಗುವ ರಸ್ತೆಗೆ ಸವಣೂರು ಗ್ರಾ.ಪಂ.ವತಿಯಿಂದ ಸೋಲಾರ್ ದಾರಿದೀಪ ಅಳವಡಿಸಲಾಗಿತ್ತು. ಆದರೆ ಅಳವಡಿಸಿದ ಸ್ವಲ್ಪ ಸಮಯದಲ್ಲೇ ಅದನ್ನು ಕಳವು ಮಾಡಲಾಗಿತ್ತು. ರಸ್ತೆಯಲ್ಲಿ ದಾರಿದೀಪವಿದ್ದರೆ ಆ ರಸ್ತೆಯಲ್ಲಿ ಸಾಗುವಾಗ ಗುರುತಿಸುವ ಸಾಧ್ಯತೆ ಇರುವದರಿಂದ ಅದನ್ನು ಕಳವು ಮಾಡಿರುವ ಕುರಿತು ಸಂಶಯ ವ್ಯಕ್ತಪಡಿಸಲಾಗುತ್ತಿದೆ. ಸೋಲಾರ್ ಕಳ್ಳತನಕ್ಕೂ ಈ ದುಷ್ಕೃತ್ಯ ನಡೆಸಿದವರಿಗೂ ಸಾಮ್ಯತೆ ಇರುವ ಅಂಶ ಕಂಡುಬರುತ್ತಿದೆ. ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ರಸ್ತೆಯಲ್ಲಿನ ಮೋರಿಯ ಪಕ್ಕ ಮದ್ಯದ ಬಾಟಲಿಗಳೂ ಕಾಣಿಸಿದ್ದು, ಅಕ್ರಮ ಚಟುವಟಿಕೆ ನಡೆಸುವ ಕುರುಹಾಗಿದ್ದು, ಪೋಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ಡಿ.ಎನ್. ಈರಯ್ಯ ಹಾಗೂ ಸಿಬಂದಿಗಳು ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.