(ನ್ಯೂಸ್ ಕಡಬ) newskadaba.com ಮಾ. 14: ಮಂಗಳೂರು: ಕೇರಳದಿಂದ ಬಂದು ಮಂಗಳೂರಿನಲ್ಲಿ ಭಾರಿ ದುಷ್ಕೃತ್ಯಕ್ಕೆ ಸಂಚು ಎಸಗಿದ್ದ ಒಂದು ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್‌ನಿಂದ ಪಿಸ್ತೂಲುಗಳು, ಗುಂಡು, ಗಾಂಜಾ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳ ಮೂಲದ ಐವರು ನಟೋರಿಯಸ್ ಅಪರಾಧಿಗಳನ್ನು ಬಂಧಿಸಲಾಗಿದೆ. ವಾಮಂಜೂರಿನಲ್ಲಿ ಮುಸ್ಲಿಂ ಧರ್ಮಗುರುವಿನ ಮೇಲಾದ ಮಿಸ್ ಫೈರ್ ಪ್ರಕರಣದ ತನಿಖೆ ಮಾಡುವ ವೇಳೆ ಇವರು ಸಿಕ್ಕಿಬಿದ್ದಿದ್ದಾರೆ.

ಕಳೆದ ಜನವರಿಯಲ್ಲಿ ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ಮುಸ್ಲಿಂ ಧರ್ಮಗುರು ಸಫ್ವಾನ್ ಎಂಬುವರ ಮೇಲೆ ಗುಂಡು ಹಾರಿಸಲಾಗಿತ್ತು. ಅಕ್ರಮ ಪಿಸ್ತೂಲ್ನಿಂದ ಅದ್ದು ಅಲಿಯಾಸ್ ಬದ್ರುದ್ಧೀನ್ ಎಂಬಾತ ಗುಂಡು ಹೊಡೆದ ಆರೋಪದ ಮೇಲೆ ಬಂಧಿತನಾಗಿದ್ದ. ಈ ಬಗ್ಗೆ ಹೆಚ್ಚಿನ ತನಿಖೆಗೆ ಇಳಿದ ಪೊಲೀಸರು ಸತತ ಎರಡು ತಿಂಗಳ ಕಾರ್ಯಾಚರಣೆ ಬಳಿಕ ಕೇರಳ ಮೂಲಕ ನಟೋರಿಯಸ್ ಅಂತಾರಾಜ್ಯ ಕ್ರಿಮಿನಲ್ಗಳನ್ನು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಮೂಲದವರಾದ ಮನ್ಸೂರ್, ನೌಫಾಲ್, ಅಬ್ದುಲ್ ಲತೀಫ್ ಅಲಿಯಾಸ್ ತೋಕು ಲತೀಫ್, ಮೊಹಮ್ಮದ್ ಅಜ್ಗರ್, ಮೊಹಮ್ಮದ್ ಸಾಲಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಕಂಟ್ರಿಮೇಡ್ ಪಿಸ್ತೂಲ್, 6 ರೌಂಡ್ಸ್ ಲೈವ್ ಬುಲೆಟ್ಸ್, 12 ಕೆಜಿ ಗಾಂಜಾ, ಕಾರು, ಮೊಬೈಲ್ ವಶಪಡಿಸಿಕೊಂಡಿದ್ದಾರೆ.