(ನ್ಯೂಸ್ ಕಡಬ) newskadaba.com ಮಾ. 12 ಬೆಂಗಳೂರು: ರಾಜ್ಯದಾದ್ಯಂತ ಒಣ ಹವೆ ಮುಂದುವರಿದಿದೆ. ಈ ಮಧ್ಯೆ ಮಂಗಳವಾರ ಹಲವೆಡೆ ಮಳೆ ಸುರಿದು ಕೆಂಡದಂತಹ ಬಿಸಿಲಿನಿಂದ ಬಸವಳಿದಿದ್ದ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರು ನಗರದ ಹಲವೆಡೆ ದಿಢೀರ್ ಮಳೆಯಾಗಿದೆ. ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ವಿವಿಧೆಡೆ ವರ್ಷಧಾರೆಯಾಗಿದೆ. ಇನ್ನು ಬುಧವಾರ (ಮಾ. 12)ವೂ ಹಲವೆಡೆ ಬೇಸಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ 1 ಅಥವಾ 2 ಸ್ಥಳಗಳಲ್ಲಿ ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.


ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವಾಮಾನ ಇರಲಿದೆ. ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯಲ್ಲಿ ಶುಭ್ರ ಆಕಾಶ ಇರಲಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33°C ಮತ್ತು 19°C ಇರುವ ಸಾಧ್ಯತೆ ಇದೆ.