ಎಪ್ರಿಲ್ 4: ಸವಣೂರು ಚಂದ್ರನಾಥ ಬಸದಿಯ 17ನೇ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಮಾ.30. ಇಲ್ಲಿನ ಅತಿಶಯ ಕ್ಷೇತ್ರ ಪುಷ್ಪಪುರ ಪುದುಬೆಟ್ಟು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ಪಂಚ ಕಲ್ಯಾಣಪೂರ್ವಕ ಪ್ರತಿಷ್ಠಾ ಮಹೋತ್ಸವದ 17ನೇ ವಾರ್ಷಿಕೋತ್ಸವವು ಶಿವಮೊಗ್ಗದ ಶ್ರೀ ಹೊಂಬುಜ ಅತಿಶಯ ಕ್ಷೇತ್ರದ ಶ್ರೀ ಮದ್ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಎ.4 ರಂದು ನಡೆಯಲಿದೆ.

ಎ.4ರಂದು ಬೆಳಿಗ್ಗೆ ತೋರಣ ಮುಹೂರ್ತ, ವಿಮಾನ ಶುದ್ದಿ, ಮಂತ್ರನ್ಯಾಸ, ತಿಲಕನ್ಯಾಸ, ಭಗವಾನ್ ಚಂದ್ರನಾಥ ಸ್ವಾಮಿಯ ಕಲಾರೋಪಣೆ, ಮಧ್ಯಾಹ್ನ ಮಕ್ಕಳ ಬಸದಿಯ ಭಗವಾನ್ ಶ್ರೀ ಪಾಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಮಾತೆ ಶ್ರೀ ಪದ್ಮಾವತಿ ದೇವಿ ಹಾಗೂ ಕ್ಷೇತ್ರಪಾಲ ಆರಾಧನೆ, ಸಾಯಂಕಾಲ ಪದ್ಮಾವತಿ ದೇವಿಯ ಕಲಾರೋಪಣೆ, ರಾತ್ರಿ ಲಕ್ಷ ಹೂವಿನ ಪೂಜೆ, ನಂತರ ಶ್ರೀ ಮದ್ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳಿಂದ ಮಂಗಲ ಪ್ರವಚನ ಶುಭಾಶೀರ್ವಾದ, ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವ, ಪುರ ಮೆರವಣಿಗೆ, ಕಟ್ಟೆ ಪೂಜೆಯ ಬಳಿಕ ಶ್ರೀ ಸರ್ವಾಹ್ನ ಯಕ್ಷರ ಬಲಿ ಉತ್ಸವ, ಭಗವಾನ್ ಚಂದ್ರನಾಥ ಸ್ವಾಮಿಗೆ 108 ಕಲಶಾಭಿಷೇಕ ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದೆ ಎಂದು ಜಿನ ಮಂದಿರದ ಆಡಳಿತ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರ ವಿಶೇಷತೆ
ದ.ಕ.ಜಿಲ್ಲೆಯು ಹಲವಾರು ಜೈನ ಬಸದಿಗಳ ತಾಣವಾಗಿದೆ. ಈ ಬಸದಿಗಳ ವಾಸ್ತುಶಿಲ್ಪಗಳ, ಕಟ್ಟಡ ವಿನ್ಯಾಸ ಅವರ್ಣನೀಯ. ಇಂತಹ ಬಸದಿಗಳಲ್ಲಿ ಶ್ರೇಷ್ಠ ಬಸದಿ ಪುತ್ತೂರು ತಾಲೂಕಿನ ಸವಣೂರಿನ ಪುಷ್ಪಪುರದಲ್ಲಿದೆ. ಈ ಬಸದಿಗೆ ಸುಮಾರು 1300 ವರ್ಷಗಳ ಇತಿಹಾಸವಿದೆ. ಅತೀ ಪುರಾತನ ಪೀಠ ಪರಂಪರೆ ಹೊಂದಿರುವ ಶಿವಮೊಗ್ಗ ಜಿಲ್ಲೆಯ ಹೊಂಬುಂಜ ಮಠದ ಆಡಳಿತಕ್ಕೊಳಪಟ್ಟ ಪುತ್ತೂರು ತಾಲೂಕಿನ ಸವಣೂರು ಪದುಬೆಟ್ಟುವಿನಲ್ಲಿರುವ 1008 ಚಂದ್ರನಾಥ ಬಸದಿಯಲ್ಲಿ ಈಗ ಜಾತ್ರಾ ಸಂಭ್ರಮ..

Also Read  ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಮಂಕಾಳ ಎಸ್. ವೈದ್ಯ ನೇಮಕ

ಕಾರುಣ್ಯಮೂರ್ತಿ ಪದ್ಮಾವತಿ
ಕರ್ನಾಟಕದ ಎಲ್ಲಾ ಬಸದಿಗಳಲ್ಲಿ ಪದ್ಮಾವತಿ ದೇವಿಯೂ ಉತ್ತರಭಾಗದಲ್ಲಿ ನೆಲೆನಿಂತಿದ್ದರೆ, ಇಲ್ಲಿನ ಬಸದಿಯಲ್ಲಿ ಪದ್ಮಾವತಿ ದೇವಿಯು ಪೂರ್ವಭಾಗದಲ್ಲಿನಿಂತಿದ್ದಾರೆ. ಭಕ್ತರು ದೇವಿಗೆ ಹೂವಿನ ಪೂಜೆಯ ಮೂಲಕ ತಮ್ಮ ಬೇಡಿಕೆಯಿಡುತ್ತಾರೆ .ಪೂಜೆಯ ವೇಳೆಯಲ್ಲಿ ದೇವಿಯ ಬಲಭಾಗದಿಂದ ಹೂವು ಬಿದ್ದರೆ ತಮ್ಮ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ದಿನ ನಡೆಯುವ ವಿಶೇಷ ಪೂಜೆಗೆ ಭಕ್ತರ ದಂಡೇ ಪಾಲ್ಗೊಳ್ಳುತ್ತದೆ. ಪುತ್ತೂರು ತಾಲೂಕಿನ ಸವಣೂರು ಹಾಗೂ ಉಡುಪಿ ತಾಲೂಕಿನ ಅಲೆವೂರು ಜೈನ ಶ್ರಾವಿಕರಿಂದ ತುಂಬಿತುಳುಕಿದ ಊರೆಂದು ಹೇಳುತ್ತಾರೆ. ಸವಣೂರಿನ ಜಿನಮಂದಿರದ ಪಶ್ಚಿಮಕ್ಕೆ ಒಂದು ಕಿ.ಮೀ ದೂರವಿರುವ ಮಠವೆಂಬ ಸ್ಥಳದ ತನಕ ಪುದ್ದೊಟ್ಟು ಎಂಬ ಹೆಸರಿನ ಪೇಟೆ ಇದ್ದು ಇಲ್ಲಿ ನೂರಾರು ಮನೆಗಳಿದ್ದವು ಎನ್ನುತ್ತಾರೆ ಎಂಬುದಕ್ಕೆ ಪ್ರತೀಕವಾಗಿ ನೂರೊಂದು ಬಾವಿಗಳ ಕುರುಹುಗಳು ಸುಮಾರು ಹಿಂದಿನ ತನಕ ಕಾಣುತ್ತಿದ್ದವು. ಆದರಿಂದ ಹಿಂದೆ ಜೈನ ಶ್ರಾವಣರು ಇಲ್ಲಿ ನೆಲೆಸಿದ ಕಾರಣ ಶ್ರವಣೂರು (ಶ್ರವಣರ ಊರು) ಮುಂದೆ ಸವಣೂರು ಎಂಬುದು ಆಗಿರಬೇಕು. ಇಲ್ಲಿನ ಮೂಲ ಬಸದಿಯಲ್ಲಿದ್ದ ಚಂದ್ರನಾಥ ಸ್ವಾಮಿಯ ಶಿಲಾಬಿಂಬವು ಶಿಥಿಲಗೊಂಡಿದ್ದರಿಂದ ಸುಳ್ಯ ತಾಲೂಕಿನ ಬೆಳ್ಳಾರೆಯ ಬಸದಿಯಲ್ಲಿದ್ದ ಪಾಶ್ರ್ವನಾಥ ಸ್ವಾಮಿಯ ಲೋಹದ ಬಿಂಬವನ್ನು ಸ್ಥಾಪಿಸಲಾಗಿತ್ತು. ಈ ಹಿಂದಿನ ಚಂದ್ರನಾಥ ಸ್ವಾಮಿಯ ಬಿಂಬವನ್ನು ಕುಮಾರಧಾರ ನದಿಯಲ್ಲಿ ವಿಸರ್ಜನೆ ಮಾಡುವಾಗ ಎರಡು ಸಲ ಅದು ಮುಳುಗದೆ ತೇಲಿ ಬಂತಂತೆ. ಆಗ ಮಾಡಿಕೊಂಡ ಹರಿಕೆಯಂತೆ ದೇವರಿಗೆ ನಿತ್ಯ ಪೂಜೆ ಸಲ್ಲಿಸುವಾಗ ಮೊದಲು ಚಂದ್ರನಾಥ ಸ್ವಾಮಿಯ ಸ್ತುತಿಪಾಠ ಮಾಡಿ ಆನಂತರ ಪಾಶ್ರ್ವನಾಥ ಸ್ತುತಿ ಮಾಡಿ ಪೂಜೆ ಮಾಡುತ್ತೇವೆ. ಪಾಶ್ರ್ವನಾಥರ ಮೂರ್ತಿ ತಾತ್ಕಾಲಿಕವೆಂದೂ ಮುಂದೆ ಚಂದ್ರನಾಥ ಸ್ವಾಮಿಯ ಬಿಂಬವನ್ನೇ ಪ್ರತಿಷ್ಠಾಪಿಸುತ್ತೇವೆ ಎಂದಾಗ ಬಿಂಬವು ನದಿ ನೀರಿನಲ್ಲಿ ಮುಳುಗಿತು ಎನ್ನುವ ಪ್ರತೀತಿ ಇದೆ. ಬಳಿಕ 2001ನೇ ಇಸವಿಯಲ್ಲಿ ಪಂಚಕಲ್ಯಾಣ ಮಹೋತ್ಸವ ನಡೆಸಿ ಚಂದ್ರನಾಥ ಸ್ವಾಮಿಯ ಬಿಂಬವನ್ನು ಪ್ರತಿಷ್ಟಾಪಿಸಲಾಯಿತು.

Also Read  ►►ಕವರ್ ಸ್ಟೋರಿ ► ಪೇರಡ್ಕ - ಕಾಯರಡ್ಕ ರಸ್ತೆಯಲ್ಲಿ ಸಂಚಾರ ದುಸ್ತರ ► ಅಪತ್ಭಾಂದವ ರಸ್ತೆಯಲ್ಲಿ ಎರಡು ಕಿ.ಮೀ. ಸಂಚರಿಸಲು 20 ನಿಮಿಷ..!!

ಮಕ್ಕಳ ಬಸದಿ
ಮುಖ್ಯಬಸದಿಯ ಎದುರು ಗುಡ್ಡದಲ್ಲಿ ಮಕ್ಕಳ ಬಸದಿಯಿದ್ದು ಇದು ಕರಿಕಲ್ಲಿನಿಂದ ನಿರ್ಮಿಸಿದ್ದಾಗಿದೆ.ಇದನ್ನು ಮಕ್ಕಳೇ ಸೇರಿ ರಚಿಸದ್ದಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಪಾಶ್ರ್ವನಾಥ ಸ್ವಾಮಿಯಿದ್ದು ಅದರ ಎಡಬಾಗದಲ್ಲಿ ಧರಣೇಂದ್ರ, ಬಲಭಾಗದಲ್ಲಿ ಪದ್ಮಾವತಿಯು ಯಕ್ಷಯಕ್ಷಿಯಾಗಿದ್ದಾರೆ.  ಮಕ್ಕಳ ಬಸದಿಯ ಹಿಂಬದಿಯ ಭಾಗದಲ್ಲಿ ಜಿನೈಕ್ಯರಾದ ಜೈನಮುನಿಗಳ ಸ್ತೂಪಗಳು ಕಾಣ ಸಿಗುತ್ತಿದೆ. ಶ್ರೀಕ್ಷೇತ್ರ ಹೊಂಬುಜ ಮಠದ ಪೀಠ ಅಕಾರಕ್ಕೊಳಪಟ್ಟಿರುವ ಈ ಜಿನಮಂದಿರ ಈ ಭಾಗದ ಭಕ್ತರ ಶ್ರದ್ದಾಕೇಂದ್ರವಾಗಿದೆ.

ಹದಿನಾರು ಎಸಳಿನ ಕೇಪುಳ ಹೂವು
ಇಲ್ಲಿನ ಇನ್ನೊಂದು ವಿಶೇಷತೆ 16 ಎಸಳಿನ ಕೇಪಲ ಹೂ ನಿತ್ಯ ಅರಳಿ ಶೋಭಿಸುತ್ತಿರುವುದು. ಈ ಕ್ಷೇತ್ರದಲ್ಲಿ ಪದ್ಮಾವತಿ ಮಾತೆಯ ಕೃಪಾಕಟಾಕ್ಷ ಅತಿಶಯವಾಗಿದ್ದು ಈ ಕ್ಷೇತ್ರ ಬಡಗು ದಿಕ್ಕಿಗೆ ಸಂಪೂರ್ಣವಾಗಿ ತೆರೆದುಕೊಂಡಿದೆ. ಇಲ್ಲಿಗೆ ಪೂಬೆಟ್ಟು ಅಥವಾ ಪುಷ್ಪಪುರವೆಂದು ಹೆಸರು ಪಡೆಯಲು ಇಲ್ಲಿರುವ ಹದಿನಾರು ಎಸಳಿನ ಕೇಪಲ ಹೂವು ನಿತ್ಯ ಅರಳಿ ಶೋಭಿಸುತ್ತಿರುವುದು ಕೂಡಾ ಕಾರಣವಾಗಿರಬಹುದು ಎನ್ನುತ್ತಾರೆ. ಇಲ್ಲಿ ಪಾಶ್ರ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ, ಪದ್ಮಾವತಿ ಮಾತೆಗೆ ಕುಂಕುಮಾರ್ಚನೆ, ವರಹ ಪೂಜೆ, ನಿತ್ಯ ಪೂಜೆ ನಡೆಯುತ್ತದೆ.

Also Read  ನಕಲಿ ಸಹಿ ಮಾಡಿ ಸಂಬಳ ಪಡೆದಿರುವ ಆರೋಪ ► ನೆಟ್ಟಣ KFDC ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹ

-ಪ್ರವೀಣ್ ಚೆನ್ನಾವರ

error: Content is protected !!
Scroll to Top