(ನ್ಯೂಸ್ ಕಡಬ) newskadaba.com ಮಾ. 03: ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಗೆ ಷರತ್ತು ವಿಧಿಸಲಾಗಿದೆ. ಹೌದು… ಈ ಹಿಂದೆ ಪ್ರತಿ ಗೃಹ ಬಳಕೆದಾರರು ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನ ಪೂರ್ಣ ಲಾಭ ಪಡೆಯುತ್ತಿದ್ದರು. ಆದರೆ ಇದೀಗ ಹೊಸದಾಗಿ ಮನೆ ಕಟ್ಟಿದವರು ಹಾಗೂ ಬಾಡಿಗೆ ಮನೆ ಬದಲಾಯಿಸಿದವರಿಗೆ ಈ ಲಾಭ ಸಿಗುತ್ತಿಲ್ಲ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚಿಸಿದ ಬಳಿಕ 2022–23ರ ಆರ್ಥಿಕ ವರ್ಷದಲ್ಲಿ ಬಳಕೆ ಮಾಡಿದ ವಿದ್ಯುತ್ ಯೂನಿಟ್‌ನ ಸರಾಸರಿ ಪ್ರಮಾಣ ಆಧರಿಸಿ 2023ರ ಜುಲೈ 1ರಿಂದ ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಆಗಸ್ಟ್ 1ರಿಂದ ಯೋಜನೆಯ ಲಾಭ ಪ್ರತಿ ಗ್ರಾಹಕರಿಗೂ ಸಿಗುತ್ತಿದೆ. ಆದರೆ ಈಗ ಹೊಸತಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ಯೋಜನೆಯ ಪೂರ್ಣ ಲಾಭದಿಂದ ವಂಚಿತರಾಗಿದ್ದಾರೆ.
2024ರ ಜುಲೈಗೆ ಗೃಹಜ್ಯೋತಿ ಯೋಜನೆ ಜಾರಿಗೆ ಬಂದು ಒಂದು ವರ್ಷವಾಗಿತ್ತು. ಒಂದು ವರ್ಷ ಪೂರ್ಣಗೊಂಡ ಬಳಿಕ ಸರಾಸರಿ ವಿದ್ಯುತ್ ಯೂನಿಟ್ ಬಳಕೆಯನ್ನು ಪರಿಷ್ಕರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರಕಟಿಸಿದ್ದರು. ಆದರೆ, ಈವರೆಗೂ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ‘ಬಳಕೆ ಇತಿಹಾಸ’ ಇಲ್ಲದೇ ಇರುವುದರಿಂದ ಅಂತಹ ಬಳಕೆದಾರರು, ರಾಜ್ಯದ ಒಟ್ಟು ಗ್ರಾಹಕರು ಬಳಕೆ ಮಾಡುತ್ತಿದ್ದ ವಿದ್ಯುತ್ ಪ್ರಮಾಣದ ಸರಾಸರಿ ಲೆಕ್ಕ ಹಾಕಿ, ತಿಂಗಳಿಗೆ ಗರಿಷ್ಠ 53 ಯೂನಿಟ್ ಮತ್ತು ಅದಕ್ಕೆ ಶೇ 10ರಷ್ಟು ಹೆಚ್ಚುವರಿ ಸೇರಿ ಒಟ್ಟು 58 ಯೂನಿಟ್ ‘ಉಚಿತ ವಿದ್ಯುತ್’ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಅಂದರೆ, 58 ಯೂನಿಟ್ ಮೀರಿ, 200 ಯೂನಿಟ್ ಬಳಕೆಯ ಮಿತಿಯ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದರೂ, ಬಳಸಲಾದ ಹೆಚ್ಚುವರಿ ಯೂನಿಟ್‌ನ ಶುಲ್ಕವನ್ನು ಪಾವತಿಸಲೇಬೇಕಿದೆ.