(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.29. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಪುತ್ತೂರಿನ ಅರಿಯಡ್ಕದಿಂದ ವ್ಯಕ್ತಿಯೋರ್ವರನ್ನು ಅಪಹರಿಸಿದ್ದಾರೆಂದು ಹೇಳಲಾಗಿದ್ದ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಜಮೀನು ವಿಚಾರದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ನಾಪತ್ತೆಯಾಗಿದ್ದ ವ್ಯಕ್ತಿ ತಾನೇ ಹೆಣೆದ ನಾಟಕವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕುತ್ಯಾಡಿ ಶ್ರೀಧರ ಎಂಬವರ ಮನೆಗೆ ಸೋಮವಾರ ರಾತ್ರಿ ಪೊಲೀಸ್ ಡ್ರೆಸ್ ಧರಿಸಿ ಇಬ್ಬರು ಬಂದಿದ್ದು, ಬಂದವರು ಸಂಪ್ಯ ಪೊಲೀಸ್ ಠಾಣೆಯಿಂದ ಬಂದಿರುತ್ತೇವೆ ನೀವು ಠಾಣೆಗೆ ಬನ್ನಿ ಎಂದು ತುಳು ಭಾಷೆಯಲ್ಲಿ ಹೇಳಿ ಶ್ರೀಧರರವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಶ್ರೀಧರರವರ ಪತ್ನಿ ಸೌಮ್ಯ ಸಂಪ್ಯ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಮಂಗಳವಾರದಂದು ಸಂಪ್ಯ ಠಾಣೆಯಲ್ಲಿ ಬಂದು ವಿಚಾರಿಸಿದಾಗ ಠಾಣೆಗೆ ಕರೆದುಕೊಂಡು ಬಾರದೇ ಇರುವ ವಿಚಾರ ತಿಳಿದಿದ್ದು, ಶ್ರೀಧರರವರನ್ನು ಯಾರೋ ಅಪರಿಚಿತರು ಯಾವುದೋ ಉದ್ದೇಶದಿಂದ ಪೊಲೀಸ್ ಎಂದು ನಂಬಿಸಿ ಅಪಹರಿಸಿಕೊಂಡು ಹೋಗಿದ್ದಾರೆ ಎನ್ನಲಾಗಿತ್ತು. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಪೊಲೀಸರು ತೀವ್ರ ತನಿಖೆ ನಡೆಸಿ ಅಪಹರಣಕ್ಕೊಳಗಾಗಿದ್ದ ಶ್ರೀಧರ್ ಮಾ.28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಹಿತಿ ಆಧರಿಸಿ ಆತನನ್ನು ಕರೆತಂದು ವಿಚಾರಣೆಗೊಳಪಡಿಸಿದ್ದರು. ತನಿಖೆಯ ವೇಳೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ಜಮೀನು ವಿಚಾರದಲ್ಲಿ ಬಾವಂದಿರನ್ನು ಸಿಲುಕಿಸಲು ಶ್ರೀಧರನೇ ತನ್ನ ಪತ್ನಿ ಹಾಗೂ ಗೆಳೆಯರ ಜೊತೆಗೆ ಸೇರಿಕೊಂಡು ಹೆಣೆದ ನಾಟಕವಿದು ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರ ವಿಚಾರಣೆ ವೇಳೆ ಶ್ರೀಧರ್ ”ಪೊಲೀಸ್ ವೇಷದಲ್ಲಿ ಬಂದು ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನನಗೆ ಮತ್ತು ನನ್ನ ಅಕ್ಕ ಹಾಗೂ ತಂಗಿಯ ಗಂಡಂದಿರಿಗೆ ಜಮೀನಿನ ವಿಚಾರದಲ್ಲಿ ತಕರಾರು ಇದ್ದು, ಅವರ ಮೇಲೆ ಕೇಸು ದಾಖಲಾಗಬೇಕೆಂಬ ಉದ್ದೇಶದಿಂದ ನಾನು ಸ್ನೇಹಿತರಾದ ಉಮೇಶ್, ಸೀತಾರಾಮ ಹಾಗೂ ನನ್ನ ಪತ್ನಿ ಸೌಮ್ಯ ಸೇರಿ ಹಣೆದ ನಾಟಕವಾಗಿದೆ. ಮಾ.26 ರಂದು ರಾತ್ರಿ ನಾನು ಮನೆಯಿಂದ ಹೋಗಿ ಉಮೇಶನ ಮನೆಯಲ್ಲಿ ಮಲಗಿ, ಬೆಳಗ್ಗೆ ನಾನು ಉಮೇಶನ ಜೊತೆ ದರ್ಬೆತ್ತಡ್ಕ ಮಾರ್ಗವಾಗಿ ಉಪ್ಪಳಿಗೆಗೆ ತೆರಳಿದ್ದೆ. ಅಲ್ಲಿಂದ ಸೀತಾರಾಮ ಮತ್ತು ನಾನು ಜೊತೆಯಾಗಿ ಪುತ್ತೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ ಬಂದು ಬಳಿಕ ಸೀತಾರಾಮ ನನ್ನನ್ನು ಬಿಟ್ಟು ತೆರಳಿದ್ದಾರೆ. ಬಳಿಕ ನಾನು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ದೂರು ನೀಡಲು ತೀರ್ಮಾನಿಸಿದ್ದೆ. ನನಗೆ ಯಾರೂ ಹಲ್ಲೆ ಮಾಡಿಲ್ಲ, ಅಪಹರಣವೂ ಮಾಡಿಲ್ಲ ಎಂದು ತಿಳಿಸಿದ್ದಾನೆ. ಪೊಲೀಸರು ಶ್ರೀಧರ್ ಹೇಳಿಕೆಯನ್ನು ಪಡೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.