(ನ್ಯೂಸ್ ಕಡಬ) newskadaba.com ಫೆ. 28 ನವದೆಹಲಿ: ಇಪಿಎಫ್‌ಒ ನೀಡುವ ಯುಎಎನ್ ಮತ್ತು ಆಧಾರ್ ಜತೆ ಲಿಂಕ್ ಕಲ್ಪಿಸಲು 2025ರ ಮಾರ್ಚ್ 15 ಕೊನೆ ದಿನವಾಗಿದೆ. ಲಿಂಕ್ ಕಲ್ಪಿಸುವುದು ಕಡ್ಡಾಯವಾಗಿದ್ದು, ತಪ್ಪಿದರೆ ಮುಂಬರುವ ದಿನಗಳಲ್ಲಿ ನಿಮ್ಮ ಕಂಪನಿಯು ಅಥವಾ ಉದ್ಯೋಗದಾತರು ಮಾಸಿಕ ನೀಡುವ ಇಪಿಎಫ್ ಪಾಲಿನ ಮೊತ್ತವು ಇಪಿಎಫ್ ಖಾತೆಗೆ (PF Account) ಜಮೆಯಾಗುವುದಿಲ್ಲ. ಈ ಹಿಂದೆ ಆಧಾರ್ ಹಾಗೂ ಯುಎಎನ್ ಲಿಂಕ್ ಮಾಡಲು 2025 ಫೆಬ್ರವರಿ 15ರಂದು ಕೊನೆ ದಿನವಾಗಿತ್ತು. ಆದರೀಗ ಇಪಿಎಫ್‌ಒ ಗಡುವನ್ನು ಮುಂದೂಡಿದ್ದು, ಮಾರ್ಚ್ 15 ರೊಳಗೆ ಯುಎನ್ ಜತೆಗೆ ಆಧಾರ್ ಲಿಂಕ್ ಮಾಡಬೇಕಿದೆ.
ಒಂದು ವೇಳೆ ಈ ಕಾಲಾವಧಿ ಯೊಳಗೆ ಲಿಂಕ್ ಆಗದಿದ್ದರೆ, ಉದ್ಯೋಗದಾತರು ನಿಮ್ಮ ಇಪಿಎಫ್ (EPF) ಖಾತೆಗೆ ಮಾಸಿಕ ಕೊಡುಗೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ನಿಮ್ಮ ಯುಎಎನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ನಿಮ್ಮ ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಲೂ ಸಾಧ್ಯವಾಗುವುದಿಲ್ಲ. ಹೌದು ಸಾಮಾಜಿಕ ಭದ್ರತೆ ಸಂಹಿತೆಯ ಸೆಕ್ಷನ್ 142, ಪಿಂಚಣಿ, ಗ್ರಾಚ್ಯುಟಿ ಅಥವಾ ಇನ್ನಾವುದೇ ಲಾಭವನ್ನು ಪಡೆಯಲು ಅರ್ಹರಾಗಲು ಈಗಿರುವ ಇಪಿಎಫ್ ಸದಸ್ಯರು ಆಧಾರ್ ಬಳಸಿ ತಮ್ಮ ಗುರುತನ್ನು ಧೃಡಿಕರಿಸಬೇಕಿದ್ದು, ಇಪಿಎಫ್ ಯೋಜನೆಯಡಿ ನೋಂದಾಯಿಸಲು ಹಾಗೂ ಇಪಿಎಫ್ ಯೋಜನೆಯಿಂದ ಹಿಂತೆಗೆದುಕೊಳ್ಳುವ ಸಮಯದಲ್ಲಿ ಆಧಾರ್ ಕಡ್ಡಾಯವಾಗಿದೆ.
ಹೀಗಾಗಿ, ಮಾರ್ಚ್ 15 ರೊಳಗೆ ಯುಎಎನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಉದ್ಯೋಗದಾತರು ಇಪಿಎಫ್ ಖಾತೆಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಿಲ್ಲ ಅಥವಾ ಉದ್ಯೋಗಿಗಳು ತಮ್ಮ ಇಪಿಎಫ್ ಖಾತೆಯಿಂದ ಯಾವುದೇ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ.