(ನ್ಯೂಸ್ ಕಡಬ) newskadaba.com ಫೆ. 26: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೈಲು ಪ್ರಯಾಣಿಕರ ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಮಂಗಳೂರು- ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಅನುಮತಿ ನೀಡಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಈ ರೈಲು ಸೇವೆ ವಿಸ್ತರಣೆಯಿಂದ ಪ್ರತಿನಿತ್ಯ ಸಂಚಾರ ನಡೆಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.


ಸುಮಾರು 18 ವರ್ಷಗಳಿಂದ ಮಂಗಳೂರು-ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂದು ಹೋರಾಟ ನಡೆಸಲಾಗುತ್ತಿತ್ತು. ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಈ ಪ್ರಸ್ತಾವನೆಗೆ ಅನುಮೋದನೆ ನೀಡಿ 2024ರ ನವೆಂಬರ್‌ನಲ್ಲಿ ರೈಲ್ವೆ ಮಂಡಳಿಗೆ ಶಿಫಾರಸು ಕಳಿಸಿತ್ತು. ಈಗ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಭಾರತೀಯ ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕ (ಕೋಚಿಂಗ್) ವಿವೇಕ್ ಕುಮಾರ್ ಸಿನ್ಹಾ ಆದೇಶವನ್ನು ಹೊರಡಿಸಿದ್ದಾರೆ. ಜೊತೆಗೆ ಈ ಮಂಗಳೂರು-ಪುತ್ತೂರು ನಡುವೆ ಸಂಚಾರ ನಡೆಸುತ್ತಿರುವ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ.