(ನ್ಯೂಸ್ ಕಡಬ) newskadaba.com ಫೆ. 21. ಮಂಗಳೂರಿನ ತೈಲ ಕಂಪೆನಿಯಾದ ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಜತೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಚರ್ಚೆ ನಡೆಸಿ ಅವರ ಹಲವಾರು ಸಮಸ್ಯೆ ಆಲಿಸಿದ್ದಾರೆ. ಆ ಮೂಲಕ ಕಾರ್ಮಿಕರಿಗೆ ಆರೋಗ್ಯ ಭದ್ರತೆ, ವಿಮಾ ಸೌಲಭ್ಯ, ವಿಶೇಷ ಭತ್ಯೆ ಮುಂತಾದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಎಂಆರ್‌ಪಿಎಲ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದ.ಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕ್ಯಾ. ಚೌಟ ಇವರ ನೇತೃತ್ವದಲ್ಲಿ ನಡೆದ ಎಂಆರ್‌ಪಿಎಲ್-ಒಎನ್‌ಜಿಸಿ ಕರ್ಮಚಾರಿ ಸಂಘದ ಸಭೆಯಲ್ಲಿ ಕಾರ್ಮಿಕರ ಕೆಲವೊಂದು ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ತಿಂಗಳಿಗೆ 21,000ರೂ. ಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದರೆ ಅಂಥಹ ಕಾರ್ಮಿಕರಿಗೆ ಮೆಡಿಕ್ಲೈಮ್ ಸೌಲಭ್ಯ ಒದಗಿಸಬೇಕು. 8 ವರ್ಷ ಕಳೆದರೂ ವಿಶೇಷ ಭತ್ಯೆ ದ್ವಿಗುಣಗೊಳಿಸಿಲ್ಲ ಎಂದು ಕಾರ್ಮಿಕರು ಹೇಳಿದಾಗ, ಈ ಬಗ್ಗೆ ಪರಿಶೀಲಿಸಿ ಸ್ಪೆಷಲ್ ಭತ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಎಂಆರ್‌ಪಿಎಲ್‌ಗೆ ಸೂಚಿಸಿದ್ದಾರೆ.