ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪಾರು!

(ನ್ಯೂಸ್ ಕಡಬ) newskadaba.com ಫೆ. 21.  ಕೋಲ್ಕತ್ತ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಕಾರು ಅಪಘಾತಕ್ಕೀಡಾಗಿದೆ. ಬುರ್ದ್ವಾನ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಪ್ರಯಾಣಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಸೌರವ್ ಗಂಗೂಲಿ ಅವರ ಕಾರು ದುರ್ಗಾಪುರ ಎಕ್ಸ್‌ಪ್ರೆಸ್‌ವೇ ಮೂಲಕ ಹಾದುಹೋಗುವಾಗ ಸಿಂಗೂರ್ ಬಳಿ, ಇದ್ದಕ್ಕಿದ್ದಂತೆ ವೇಗವಾಗಿ ಬಂದ ಲಾರಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಗಂಗೂಲಿ ಅವರ ಬೆಂಗಾವಲು ವಾಹನಗಳಿಗೆ ಹಾನಿಯಾಗಿದೆ.

ಲಾರಿ ಡಿಕ್ಕಿಯಾಗುತ್ತಿದ್ದಂತೆಯೇ ಗಂಗೂಲಿ ಅವರ ಕಾರಿನ ಚಾಲಕ ತಕ್ಷಣ ಬ್ರೇಕ್ ಹಾಕಿದರು. ಆಗ ಹಿಂದೆಯಿದ್ದ ಬೆಂಗಾವಲು ಪಡೆಯ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದವು ಎಂದು ವರದಿಯಾಗಿದೆ. ಸೌರವ್ ಈ ಭೀಕರ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

error: Content is protected !!