(ನ್ಯೂಸ್ ಕಡಬ) newskadaba.com ಫೆ. 20. ಬೆಂಗಳೂರು: ಇತ್ತೀಚೆಗಷ್ಟೇ ಮುಕ್ತಾಯವಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ-25 ರ ಒಟ್ಟಾರೆ 10.27 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಭಾಗವಾಗಿದ್ದ ₹315 ಕೋಟಿ ರೂಪಾಯಿಗಳ ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕ ನಿರ್ಮಾಣದ ಅನುಷ್ಠಾನ ಗುರುವಾರ ಆರಂಭಗೊಂಡಿತು. (Kolar News) ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಂಪನಿ ನಿರ್ಮಿಸಲಿರುವ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಭೂಮಿಪೂಜೆ ನೆರವೇರಿಸುವುದರೊಂದಿಗೆ ಈ ಕಾರ್ಯಯೋಜನೆ ಚಾಲನೆ ನೀಡಿದರು. ಕಂಪನಿಯು ಹಂತ ಹಂತವಾಗಿ 315 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, 550 ಮಂದಿಗೆ ಉದ್ಯೋಗ ಸಿಗಲಿದೆ. ನಿಮಿಷಕ್ಕೆ ನೂರಾರು ಬಾಟಲಿ ಉತ್ಪಾದಿಸುವ ಯಂತ್ರಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ ಎಂದು ಅವರು ಹೇಳಿದರು. ಸ್ಥಳೀಯ ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕೆಂದೂ ಸಚಿವರು ಕ್ರೋನ್ಸ್ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು. ಇದನ್ನು ಆದ್ಯತೆ ಮೇಲೆ ಮಾಡಬೇಕು ಎಂದೂ ಅವರು ಕೋರಿದರು.
ವೇಮಗಲ್ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕರ್ನಾಟಕವನ್ನು ಉತ್ಪಾದನಾ ವಲಯದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆಯೂ ಸದ್ಯದಲ್ಲೇ ಪರಿಣಿತರ ಚರ್ಚೆ ಕೂಡ ಮಾಡಲಾಗುವುದು ಎಂದ ಅವರು, ಸಿಎಸ್‌ಆರ್ ಹಣ ಕೂಡ ಸ್ಥಳೀಯರ ಅಭಿವೃದ್ಧಿಗೆ ಬಳಸುವಂತೆ ಸಚಿವರು ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳಿಗೆ ಸೂಚಿಸಿದರು. ನಮ್ಮಲ್ಲಿ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗಿದ್ದು, ಉದ್ದಿಮೆಗಳಿಗೆ ಬಂಡವಾಳದ ಮೇಲೆ ಸಹಾಯಧನ ಅಥವಾ ಉತ್ಪಾದನೆಗೆ ತಕ್ಕ ಪ್ರೋತ್ಸಾಹನ ಭತ್ಯೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಕೊಡಲಾಗಿದೆ. ಜತೆಗೆ ಅಗತ್ಯ ಅನುಮೋದನೆಗಳನ್ನು ತ್ವರಿತ ಗತಿಯಲ್ಲಿ ನೀಡಲು ಪರಿಷ್ಕೃತ ಏಕಗವಾಕ್ಷಿ ವ್ಯವಸ್ಥೆಯನ್ನೂ ತರಲಾಗಿದೆ. ಕ್ರೋನ್ಸ್ ಕಂಪನಿಯು ನಮ್ಮಲ್ಲಿ ಮುಂಬರುವ ದಿನಗಳಲ್ಲಿ ಅಪಾರ ಹೂಡಿಕೆ ಮಾಡುವ ನಿರೀಕ್ಷೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.