(ನ್ಯೂಸ್ ಕಡಬ) newskadaba.com ಫೆ. 19. ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ ಹರಿಬಿಡಲಾಗಿರುವ ನೀರನ್ನು ಫೆಬ್ರವರಿ 15ರಿಂದ ಸ್ಥಗಿತಗೊಳಿಸುವ ನಿರ್ಧಾರವನ್ನು ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಕೈ ಬಿಟ್ಟು ಮಾರ್ಚ್ 1ರವರೆಗೂ ನೀರು ಬಿಡುವಂತೆ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶಿಸಿದ್ದಾರೆ.


ಸಚಿವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 15ರಂದು ಜರುಗಿದ್ದ ಸಭೆಯಲ್ಲಿ ಶಾಸಕರುಗಳು, ಮಹಾಮಂಡಳದ ಅಧ್ಯಕ್ಷರು, ರೈತರು ಮುಖಂಡರೊಂದಿಗೆ ಚರ್ಚಿಸಿ, ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗಾಗಿ 14.87 ಟಿ.ಎಂ.ಸಿ ಹಾಗೂ ಹಿಂಗಾರು ಹಂಗಾಮಿಗೆ 16 ಟಿ.ಎಂ.ಸಿ ಹೀಗೆ ಒಟ್ಟಾರೆಯಾಗಿ 30.842 ಟಿ.ಎಂ.ಸಿ ನೀರನ್ನು ಮಲಪ್ರಭಾ ಜಲಾಶಯದಿಂದ ನೀರಾವರಿಗಾಗಿ ಒದಗಿಸಲಾಗಿದೆ.
ಅದರಂತೆ ಮಲಪ್ರಭಾ ಜಲಾಶಯದಿಂದ ನೀರಾವರಿಗಾಗಿ ಒಳಪಡುವ ಕಾಲುವೆಗಳ ಮುಖಾಂತರ ಫೆಬ್ರವರಿ 14ರ ವರೆಗೆ 16 ಟಿಎಂಸಿ ನೀರನ್ನು ನೀರಾವರಿ ಉದ್ದೇಶಕ್ಕೆ ರೈತರಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.