(ನ್ಯೂಸ್ ಕಡಬ) newskadaba.com, ಫೆ.11. : ಪಯಸ್ವಿನಿ ನದಿಯಲ್ಲಿ ಸೋಮವಾರ ಮತ್ತಷ್ಟು ಮೀನುಗಳು ಸಾವನ್ನಪ್ಪಿದ್ದು, ನೀರು ಮಲಿನಗೊಂಡಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ರವಿವಾರ ನಾಗಪಟ್ಟಣ ವೆಂಟೆಡ್ ಡ್ಯಾಂ ಕೆಳಭಾಗ ದಲ್ಲಿ ಮೀನುಗಳು ಸತ್ತು ಬಿದ್ದಿದ್ದವು. ಇದೀಗ ಸೋಮವಾರ ಪಯಸ್ವಿನಿ ನದಿಯ ನಾಗಪಟ್ಟಣ, ಭಸ್ಮಡ್ಕ, ಕಾಂತ ಮಂಗಲ ವ್ಯಾಪ್ತಿಯಲ್ಲೂ ಮೀನುಗಳು ಸತ್ತಿರುವುದು ಹಾಗೂ ಅಸ್ವಸ್ಥಗೊಂಡಿರುವುದು ಕಂಡುಬಂತು. ನದಿಯ ನೀರು ಕಲುಷಿತಗೊಂಡಿರುವುದರಿಂದಲೇ ಮೀನುಗಳು ಸಾಯುತ್ತಿವೆ ಎನ್ನಲಾಗಿದೆ.
ಇಲ್ಲಿನ ನೀರು ಕೂಡ ಕಪ್ಪು ಬಣ್ಣಕ್ಕೆ ತಿರುಗಿದ್ದು, ವಾಸನೆಯೂ ಬರುತ್ತಿದೆ. ಕಾಂತಮಂಗಲ ನದಿಯ ಒಂದು ಕಡೆಯಲ್ಲಿ ಕೆಲವರು ನೀರಿಗಿಳಿದು ಮೀನನ್ನುಹಿಡಿದು ಕೊಂಡು ಹೋಗುತ್ತಿರುವುದು ಕೂಡ ಕಂಡುಬಂದಿದೆ. ನಾಗಪಟ್ಟಣದಲ್ಲಿ ಕೆಎಫ್‌ಡಿಸಿ ರಬ್ಬರ್ ಘಟಕದಲ್ಲಿ ಘಟಕದ ತ್ಯಾಜ್ಯ ಶೇಖರಣೆ ಘಟಕದ ಟ್ಯಾಂಕ್‌ನ ಪೈಪನ್ನು ಕಿಡಿಗೇಡಿಗಳು ಒಡೆದ ಪರಿಣಾಮ ಅಮೋನಿಯ ಮಿಶ್ರಿತ ನೀರು ಪೈಪ್‌ನಿಂದ ಹೊರಕ್ಕೆ ಬಂದು ನದಿಗೆ ಸೇರಿದೆ. ಇದೇ ಕಾರಣದಿಂದ ಕೆಲವು ವರ್ಷಗಳ ಹಿಂದೆಯೂ ಇದೇ ರೀತಿ ಸಂಭವಿಸಿದೆ ಎಂಬ ಆರೋಪ ವ್ಯಕ್ತವಾಗಿದೆ. ಹಾಗಾಗಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.