(ನ್ಯೂಸ್ ಕಡಬ) newskadaba.com, ಫೆ.11. ಹಾಸನ : ಕಾಫಿ ಕುಯ್ಲಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದು ಹಲವು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪದ ನಿಡನೂರು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ತಮಿಳುನಾಡಿನ ಸೇಲಂ ನಿಂದ ಮಡಿಕೇರಿ ಜಿಲ್ಲೆಯ ಶನಿವಾರಸಂತೆಯ ಬಳಿಯ ಕಾಫಿ ಎಸ್ಟೇಟೊಂದಕ್ಕೆ ಕಾಫಿ ಕುಯ್ಲಿಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಒಂದು ಪುಟ್ಟ ಮಗು ಸೇರಿದಂತೆ 14 ಜನ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅಪಘಾತ ರಭಸಕ್ಕೆ ಕೂಲಿ ಕಾರ್ಮಿಕರ ಬಟ್ಟೆ, ಪಾತ್ರೆ, ಆಹಾರ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದವು. ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಾಗಿಸಲಾಗಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.