(ನ್ಯೂಸ್ ಕಡಬ) newskadaba.com ಜ.25 ಬೆಂಗಳೂರು: ನಗರದ ಯುನಿಸೆಕ್ಸ್ ಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಗೆ ನ್ಯಾಯಾಲಯ ಫೆಬ್ರವರಿ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಯುನಿಸೆಕ್ಸ್ ಸೆಲೂನ್‌ನಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಕಾರ್ಯಕರ್ತರು ನಗರ ಗುರುವಾರ ಮಧ್ಯಾಹ್ನ ವೇಳೆ ದಾಳಿ ನಡೆಸಿದ್ದರು. ಸ್ಥಳೀಯ ಮುಖಂಡ ಪ್ರಸಾದ್ ಅತ್ತಾವರ ನೇತೃತ್ವದ ಕಾರ್ಯಕರ್ತರು ಬೆಜೈ ಬಳಿ ಕಾರ್ಯಾಚರಿಸುತ್ತಿದ್ದ ಯುನಿಸೆಕ್ಸ್ ಸಲೂನ್‌ಗೆ ನುಗ್ಗಿ ಸೆಲೂನ್‌ನಲ್ಲಿದ್ದ ಪೀಠೋಪಕರಣಗಳು ಮತ್ತು ಗಾಜುಗಳನ್ನು ಒಡೆದು ಹಾಕಿ ಹಾನಿಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 12 ಕ್ಕೂ ಹೆಚ್ಚು ಜನರ ಗುಂಪು ಸಲೂನ್‌ನಲ್ಲಿ ಎಲ್ಲವನ್ನೂ ನಾಶಪಡಿಸಿದೆ. ಮಹಿಳಾ ಸಿಬ್ಬಂದಿ ಹಾಗೂ ಇತರರಿಗೆ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಗೃಹ ಸಚಿವ ಜಿ.ಪರಮೇಶ್ವರ ಅವರು, ಸಂಬಂಧಪಟ್ಟವರನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿರುವುದಾಗಿ ಹೇಳಿದ್ದರು. ಇನ್ನು ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು 14 ಮಂದಿಯನ್ನು ಬಂಧಿಸಿದ್ದರು.