(ನ್ಯೂಸ್ ಕಡಬ) newskadaba.com: ಸ್ಕೂಟರ್ ಮತ್ತು ಟೆಂಪೊ ನಡುವೆ ಅಪಘಾತ ಸಂಭವಿಸಿ, ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಬಳಿ ಇಂದು ಬೆಳಗ್ಗೆ ನಡೆದಿದೆ.
ಕೊಣಾಜೆ ಗ್ರಾಮದ ನಡುಪದವು ಕಾಟುಕೋಡಿ ನಿವಾಸಿ ಮೊಯ್ದೀನ್ ಕುಂಞಿ ಬಾವು ಎಂಬವರ ಪುತ್ರ ಅಬೂಬಕರ್ ಸಿದ್ದೀಕ್ ರಝ್ವಿ(22) ಮೃತಪಟ್ಟವರು.
ದೇರಳಕಟ್ಟೆ ಕಡೆಯಿಂದ ತೆರಳುತ್ತಿದ್ದ ಸ್ಕೂಟರ್ ಮತ್ತು ಮುಡಿಪು ಕಡೆಯಿಂದ ತೊಕ್ಕೊಟ್ಟಿನತ್ತ ಬರುತ್ತಿದ್ದ ಟೆಂಪೊ ನಡುವೆ ಈ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಭಾಗಶಃ ಟೆಂಪೊದೊಳಗೆ ನುಗ್ಗಿದ ಕಾರಣ ನಜ್ಜುಗುಜ್ಜಾಗಿದೆ. ಘಟನೆ ವೇಳೆ ಟೆಂಪೋದ ಮೇಲೆ ಎಸೆಯಲ್ಪಟ್ಟ ಅಬೂಬಕರ್ ಸಿದ್ದೀಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಈ ಅಪಘಾತದಲ್ಲಿ ಟೆಂಪೋ ಚಾಲಕನಿಗೂ ಕೂಡಾ ಗಾಯವಾಗಿದೆ ಎಂದು ತಿಳಿದುಬಂದಿದೆ.
ಅಬೂಬಕರ್ ಸಿದ್ದೀಕ್ ಕಾಸರಗೋಡಿನಲ್ಲಿ ಅರಬಿಕ್ ಶರೀಅತ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ