(ನ್ಯೂಸ್ ಕಡಬ) newskadaba.com ಕಡಬ, ಜು.03. ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವುದರಿಂದ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಪ್ರಗತಿಬಂಧು ಸ್ವಸಹಾಯ ಒಕ್ಕೂಟ ಬಿಳಿನೆಲೆ ವಲಯ ಸಂಯುಕ್ತ ಆಶ್ರಯದಲ್ಲಿ ರೆಂಜಿಲಾಡಿ .ಹಿ.ಪ್ರಾ.ಶಾಲೆಯಲ್ಲಿ ನಡೆದ ವಿಶ್ವ ಮಾದಕ ವಿರೋಧಿ ದಿನಾಚರಣೆ ಹಾಗೂ ಶಾಲಾ ಮಕ್ಕಳಿಗೆ ಸಾಸ್ಥ್ಯಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಹಿತ ಕಾಪಾಡುವ ಕಾರ್ಯಕ್ರಮಗಳ ಮೂಲಕ ಜನತೆಯಲ್ಲಿ ಚೈತನ್ಯ ಮೂಡಿಸುವುದರ ಮೂಲಕ ಸುಖ ಹಾಗೂ ಸ್ವಾವಲಂಬಿ ಜೀವನ ನಡೆಸುವಂತಾಗಲು ಯೋಜನೆಯ ಕಾರ್ಯವೈಕರಿ ಮಾದರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಮಾತನಾಡಿ, ಯುವ ಸಮಾಜ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಅದೆಷ್ಟೋ ಕುಟುಂಬಗಳು ದುಶ್ಚಟದಿಂದ ಮುಕ್ತವಾಗಿ ಸುಂದರ ಜೀವನ ರೂಪಿಸುವಂತಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ತಾ.ಪಂ.ಸದಸ್ಯ ಗಣೇಶ್ ಕೈಕುರೆ ಮಾತನಾಡಿದರು. ಡೆಪ್ಪುಣಿ ಗುತ್ತು ಮಹಾವೀರ ಜೈನ್ ಶುಭ ಹಾರೈಸಿದರು. ರೆಂಜಿಲಾಡಿ ಒಕ್ಕೂಟದ ಅಧ್ಯಕ್ಷೆ ಪುಪ್ಷಾವತಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ.ಧ.ಗ್ರಾ.ಯೋಜನೆ ಪುತ್ತೂರು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ಪ್ರಾಸ್ತ್ತಾವಿಸಿದರು. ಗೋಳಿಯಡ್ಕ ಅಂಗನವಾಡಿ ಕಾರ್ಯಕರ್ತೆ ರಾಜೀವಿ ರೈ ಸ್ವಾಗತಿಸಿ, ಸೇವಾ ಪ್ರತಿನಿಧಿ ಕರುಣಾಕರ ಕುಬಲಾಡಿ ವಂದಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರಾಜು ಗೌಡ ಕಾರ್ಯಕ್ರಮ ನಿರೂಪಿಸಿದರು.