(ನ್ಯೂಸ್ ಕಡಬ) newskadaba.com ಕಡಬ, ಮಾ.27. ಕಡಬ ಗ್ರಾ.ಪಂ. ವ್ಯಾಪ್ತಿಯ ಕಳಾರ ದಲಿತ ಕಾಲೋನಿಯಲ್ಲಿ ಸುಳ್ಯ ಶಾಸಕರ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಸೋಮವಾರ ಗುದ್ದಲಿಪುಜೆ ನೆರವೇರಿಸಲಾಯಿತು.
ಶಾಸಕರ ಸುಮಾರು 5 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆಗೆ ತಾ.ಪಂ.ಮಾಜಿ ಅಧ್ಯಕ್ಷ ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ ಗುದ್ದಲಿಪುಜೆ ನೆರವೇರಿಸಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಮಾಜದ ಎಲ್ಲಾ ವರ್ಗದ ಜನತೆ ನೆಮ್ಮದಿಯ ಬದುಕನ್ನು ಕಾಣಬೇಕು ಎಂಬ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಮುಂದೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲಿದ್ದು ಸುಳ್ಯ ಶಾಸಕ ಎಸ್.ಅಂಗಾರ ಅಭೂತಪುರ್ವ ಗೆಲುವು ಸಾಧಿಸಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸುವುದು ನಿಶ್ಚಿತವಾಗಿದೆ. ಶಾಸಕರು ತನ್ನ ಅಧಿಕಾರವಧಿಯಲ್ಲಿ ಪ್ರಮಾಣಿಕ ಹಾಗೂ ಕಳಂಕ ರಹಿತ ಆಡಳಿತವನ್ನು ನೀಡಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಇದೀಗ ಕಳಾರ ಕಾಲೋನಿಯ ಬಹುದಿನಗಳ ಕನಸಾದ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸಿ ಈ ಭಾಗದ ಜನರ ಬೇಡಿಕೆಗೆ ನ್ಯಾಯ ಒದಗಿಸಿದ್ದಾರೆ. ಇನ್ನು ಮುಂದೆಯೂ ಶಾಸಕರು ಈ ಭಾಗದ ಅಭಿವೃದ್ದಿಗೆ ಸಹಕಾರ ನೀಡಲಿದ್ದಾರೆ ಎಂದರು.
ಬಿಜೆಪಿ ಮುಖಂಡ ಸತೀಶ್ ನಾಯಕ್ ಮಾತನಾಡಿ ನಮ್ಮ ಶಾಸಕರು ನುಡಿದಂತೆ ನಡೆದಿದ್ದಾರೆ. ಈ ಕಾಲೋನಿಗೆ ಅಗತ್ಯ ಅನುದಾನ ಒದಗಿಸಿ ತಡೆಗೋಡೆ ನಿರ್ಮಾಣ ಮಾಡಬೇಕಾಗಿ ನೀಡಿರುವ ಭರವಸೆಯನ್ನು ಈಡೇರಿಸುತ್ತಿದ್ದಾರೆ. ಶಾಸಕರನ್ನು ಮುಂದೆಯೂ ನಾವು ಶಾಸಕರನ್ನಾಗಿ ನೋಡಬೇಕಾದರೆ ನಾವೆಲ್ಲಾ ಒಟ್ಟಾಗಿ ಶ್ರಮಿಸಬೇಕೆಂದರು. ಕಾಲೋನಿಯ ಹಿರಿಯ ಮಹಿಳೆ ದೀಪ ಬೆಳಗಿಸಿದರು. ದಲಿತ ಮುಖಂಡ ರಾಘವ ತೆಂಗಿನಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಾ.ಕೃ.ಪಸ.ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೇಕರ, ಕಡಬ ಗ್ರಾ.ಪಂ.ಸದಸ್ಯರಾದ ಹರ್ಷ ಕೋಡಿ, ಆದಂ ಕುಂಡೋಳಿ, ಮಾಧವ, ಸರೋಜಿನಿ ಆಚಾರ್ಯ, ಎಡಮಂಗಲ ಗ್ರಾ.ಪಂ.ಸದಸ್ಯ ಕಮಲಾಕ್ಷ, ಪ್ರಮುಖರಾದ ಕೃಷ್ಣಪ್ಪ ಟೈಲರ್, ಅಶೋಕ್ ಕುಮಾರ್ ಪಿ, ಮೇದಪ್ಪ ಗೌಡ, ಕಿಶನ್ ರೈ ಪೆರಿಯಡ್ಕ, ನಾರಾಯಣ ರೈ, ಬಾಲಕೃಷ್ಣ, ಪಿಜಿನ, ಅಬೂಬಕ್ಕರ್, ಇಸ್ಮಾಯಿಲ್, ಚಿದಾನಂದ, ಯೋಗೀಶ, ಬಾಲಚಂದ್ರ, ರತ್ನಾವತಿ ವಿಜಯ, ಪುಷ್ಪಾವತಿ, ರಾಜೀವಿ, ಆದಂ, ನಝೀರ್, ಮುಸ್ತಫ, ಮಾಯಿಲಪ್ಪ ಗೌಡ, ಶೀನಪ್ಪ, ಸುಂದರ, ಸಮೀಮ, ಜಮೀರ್, ಫರೂಕ್, ಅಜೀಜ್, ಸಮೀರ್, ಮಿರ್ಷಾದ್ ಮೊದಲಾದವರು ಉಪಸ್ಥಿತರಿದ್ದರು. ಕಡಬ ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಗಿರೀಶ್ ಎ.ಪಿ ಸ್ವಾಗತಿಸಿದರು. ಸುಳ್ಯ ಮಂಡಲ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಫಯಾಝ್ ವಂದಿಸಿದರು.