ಪ್ರೌಢಶಾಲಾ ಶಿಕ್ಷಕರಿಗೆ ಜೀವಶಾಸ್ತ್ರ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಅ. 31. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಜೀವಶಾಸ್ತ್ರದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಪ್ರಾತ್ಯಕ್ಷಿಕೆ ಹಾಗೂ ಪ್ರಯೋಗಗಳೊಂದಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಆಳ್ವಾಸ್ ಕಾಲೇಜಿನ ಆಕಾಡೆಮಿಕ್ ಡೀನ್ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ರಾಮ ಭಟ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಕೃತಿಯ ಹಾಗೂ ಪರಿಸರದ ಜೀವರಾಶಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಹಾಗೂ ಸುಲಭ ಪ್ರಯೋಗಗಳಿಂದ ಜೈವಿಕ ತಂತ್ರಜ್ಞಾನದ ಲಾಭ ಹಾಗೂ ಉಪಯೋಗಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ.ರಾವ್ ಮಾತನಾಡಿ, ನಮ್ಮ ಸಸ್ಯ ಸಂಪತ್ತು ಹಾಗೂ ಜೀವ ವೈವಿಧ್ಯತೆಗಳ ಅರಿವನ್ನು ಪ್ರೌಢಶಾಲಾ ಮಟ್ಟದಲ್ಲಿ ಮೂಡಿಸುವ ಪ್ರಯತ್ನವನ್ನು ಮಾಡಿದಲ್ಲಿ ಪ್ರಕೃತಿ ಪ್ರೇಮ ವಿದ್ಯಾರ್ಥಿಗಳಲ್ಲಿ ತಾನಾಗಿಯೇ ಮೂಡಲಿದೆ. ಆಹಾರ ಸಮಸ್ಯೆ, ಪ್ರಕೃತಿ ದತ್ತ ಸಂಪತ್ತಿನ ವಿನಾಶಕ್ಕೆ ಪರಿಹಾರೋಪಾಯಗಳನ್ನು ಕಂಡುಹಿಡಿಯುವ ಭಾರ ನಮ್ಮ ಮೇಲಿದೆ ಎಂದರು.

Also Read  ಏ.29ರಂದು ಮಂಗಳೂರಿನಲ್ಲಿ ಅಮಿತ್‌ ಷಾ ಬೃಹತ್‌ ರೋಡ್‌ ಶೋ         

ಸಂಪನ್ಮೂಲ ವ್ಯಕ್ತಿಗಳಾದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವೈಜ್ಞಾನಿಕಾಧಿಕಾರಿ ರಾಮಕೃಷ್ಣ ಮರಾಠಿ, ಸಸ್ಯ ಪ್ರಪಂಚದ ವಿಶೇಷತೆಗಳನ್ನು ವಿವರಿಸಿ ಔಷಧೀಯ ಸಸ್ಯಗಳ ಪರಿಚಯ ಮತ್ತು ಮಹತ್ವವನ್ನು ತಿಳಿಸಿದರು. ಜೈವಿಕ ತಂತ್ರಜ್ಞಾನದ ಡಾ| ರಾಮ್ ಭಟ್, ಜೈವಿಕ ತಂತ್ರಜ್ಞಾನದ ಮಾಹಿತಿಗಳನ್ನು ನೀಡಿದರು. ಡಾ| ದಯಾನಂದ ಪೈ, ಸತೀಶ್ ಪೈ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಜಯಕರ ಭಂಡಾರಿ, ಜೆನೆಟಿಕ್ ಇಂಜಿನಿಯರಿಂಗ್ ಬಗ್ಗೆ ವಿವರಿಸಿದರು. ಮಧ್ಯಾಹ್ನದ ಅಧಿವೇಶನವು ಪ್ರಾತ್ಯಕ್ಷಿಕೆ ಹಾಗೂ ಪ್ರಯೋಗಗಳಿಗೆ ಮೀಸಲಾಗಿತ್ತು. ಜೀವಶಾಸ್ತ್ರದ ಪ್ರಯೋಗಗಳು, ಕಸಿಕಟ್ಟುವುದು, ನೀರಿನ ಮತ್ತು ಮಣ್ಣಿನ ಪರೀಕ್ಷೆ ಇತ್ಯಾದಿಗಳನ್ನು ಅಧ್ಯಾಪಕರು ವೀಕ್ಷಿಸಿದರು. ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಇನ್ನೊವೇಶನ್ ಹಬ್ ಮೆಂಟರ್ ಹೇಮಂತ್ ಸ್ವಾಗತಿಸಿದರು. ವಿಘ್ನೇಶ್ ಭಟ್ ವಂದಿಸಿದರು.

error: Content is protected !!
Scroll to Top