ಅನುದಾನ ಬಿಡುಗಡೆಗೆ ಸಚಿವ ರೈ ಅವರಿಂದ ತಡೆ ► ಶಾಸಕ ಅಂಗಾರ ಆರೋಪ

(ನ್ಯೂಸ್ ಕಡಬ) newskadaba.com ಮಾ.20. ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಡಿಯಲ್ಲಿ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ ಬಿಡುಗಡೆಗೊಂಡಿದ್ದ ಎರಡು ಕೋಟಿ ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಅವರು ಇಲಾಖಾಧಿಕಾರಿಗಳಿಗೆ ಒತ್ತಡ ಹಾಕಿ ತಡೆ ಹಿಡಿದು ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಆರೋಪಿಸಿದರು.

ಅವರು ಭಾನುವಾರ ಕಡಬ ತಾಲೂಕಿನ ಕೊೖಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುಲೂರು ಎಂಬಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿಯಲ್ಲಿ ಹತ್ತು ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಕಾಂಕ್ರೀಟಿಕರಣವನ್ನು ಉದ್ಘಾಟನೆಗೊಳಿಸಿ ಮಾತನಾಡಿದರು. ಸಚಿವ ರೈ ಅವರು ಈ ಹಿಂದೆ ಗ್ರಾಮವಿಕಾಸ ಯೋಜನೆಯ ಆಯ್ಕೆ ಸಂದರ್ಭ ಅನಗತ್ಯ ಮೂಗು ತೂರಿಸಿ ಶಾಸಕರ ಹಕ್ಕು ಚ್ಯುತಿ ಮಾಡಿದ್ದರು, ಈ ಸಂಬಂಧ ನಾನು ವಿಧಾನ ಸಭೆಯಲ್ಲಿ ಹಕ್ಕು ಚ್ಯುತಿ ಮಂಡನೆ ಮಾಡಿದಾಗಿ ಮುಖಭಂಗ ಅನುಭವಿಸಿದ್ದರು. ಇದೀಗ ನನ್ನ ಕ್ಷೆತ್ರದ ಅಲ್ಪ ಸಂಖ್ಯಾತ ಬಂಧುಗಳಿರುವ ಪ್ರದೇಶದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಡಿಯಲ್ಲಿ ನಾನು ಪ್ರಸ್ತಾವನೆ ಸಲ್ಲಿಸಿ ಅನುದಾನ ಕೂಡಾ ಬಿಡುಗಡೆಯಾಗಿತ್ತು. ಇದನ್ನು ಅರಿತ ಸಚಿವ ರೈ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಒತ್ತಡ ಹಾಕಿ ಅನುದಾನವನ್ನು ತಡೆಹಿಡಿಯುವಂತೆ ಮಾಡಿ ದ್ವೇಷದ ರಾಜಕಾರಣ ಮಾಡಿದ್ದಾರೆ. ನಾನೊಬ್ಬ ಬಿಜೆಪಿ ಶಾಸಕ ಎನ್ನುವ ನೆಲೆಯಲ್ಲಿ ಈ ರೀತಿಯ ಅನ್ಯಾಯ ಮಾಡಲಾಗುತ್ತಿದೆ. ಇದಕ್ಕೆ ಜನ ತಕ್ಷ ಉತ್ತರ ನೀಡಲಿದ್ದಾರೆ ಎಂದು ಹೇಳಿದ ಶಾಸಕರು,ಗೋಳಿತ್ತಡಿ-ಏಣಿತಡ್ಕ ರಸ್ತೆ ಅಭಿವೃದ್ಧಿಯಲ್ಲಿ ಕೂಡಾ ಅನಗತ್ಯ ರಾಜಕಾರಣ ಮಾಡಲಾಗಿದೆ, ಶಾಸಕರ ಅನುದಾನವನ್ನೇ ಸಚಿವರ ಲೆಟರ್ ಇಟ್ಟು ನಾವೇ ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕೊೖಲ ಗ್ರಾಮದ ಏಣಿತಡ್ಕ ಭಾಗದಲ್ಲಿ ಶಾಸಕನ ನೆಲೆಯಲ್ಲಿ ಕೋಟ್ಯಾಂತರ ರೂ ಅನುದಾನದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಮುಖ್ಯವಾಗಿ ಏಣಿತಡ್ಕದಲ್ಲಿ ಐವತ್ತು ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಲಾಗಿದೆ. ಒಂದು ಕೋಟಿ ರೂನಲ್ಲಿ ರಸ್ತೆ ನಿರ್ಮಾಣವಾಗಿದೆ, ಇನ್ನು 97 ಲಕ್ಷ ರೂ ಅನುದಾನದಲ್ಲಿ ಸಂಪರ್ಕ ರಸ್ತೆ ಉಳಿಕೆ ಭಾಗದ ಡಾಮರೀಕರಣ ಕಾರ್ಯ ನಡೆಯುತ್ತಿದೆ. ಸಬಳೂರು ಭಾಗಕ್ಕೆ ಹೋಗುವ ಜನರ ಅನುಕೂಲಕ್ಕಾಗಿ ಏಣಿತಡ್ಕ ಹಾಲಿನ ಸೊಸೈಟಿ ಬಳಿ ತೋಡೊಂದಕ್ಕೆ ಸುಮಾರು 34 ಲಕ್ಷ ರೂ ವೆಚ್ದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ಅದರ ಮೇಲೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಭಾಗದ ತ್ರಿವೇಣಿ ಸರ್ಕಲ್ನಿಂದ ಸಬಳೂರು ಭಜನಾ ಮಂದಿರ ತನಕ ಹಾಗೂ ಕುದುಳೂರು ತನಕ ಈಗಾಗಲೇ 30 ಲಕ್ಷ ರೂ ವೆಚ್ಚದಲ್ಲಿ ಸದೃಢ ಡಾಮರೀಕರಣ ಮಾಡಲಾಗಿದೆ ಎಂದು ಹೇಳಿದ ಶಾಸಕರು ಕುದುಲೂರು ರಸ್ತೆ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಒದಗಿಸುವುದಾಗಿ ಹೇಳಿದರು.


ಈ ಸಂದರ್ಭದಲ್ಲಿಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಕಾರ್ಯದರ್ಶಿ ಲಕ್ಷ್ಮಿನಾರಾಯಣ ರಾವ್ ಆತೂರು, ಅಲ್ಪ ಸಂಖ್ಯಾತ ಮೋರ್ಚಾದಾ ಅಧ್ಯಕ್ಷ ಅಶ್ರಫ್ ಕಾಸಿಲೆ, ಬಿಜೆಪಿ ನೆಲ್ಯಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಧರ್ಮಪಾಲ್ ರಾವ್ ಕಜೆ, ಕಡಬ ಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್. ಗೌಡ, ತೇಜಶ್ವಿನಿ ಶೇಖರ್ ಗೌಡ,. ಎ.ಪಿ.ಎಂ.ಸಿ ಮಾಜಿ ನಿರ್ದೆಶಕ ಶೀನಪ್ಪ ಗೌಡ ವಳಕಡಮ, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ, ಕೊೖಲ ಗ್ರಾಮ ಪಂಚಾಯಿತಿ ಸದಸ್ಯರಾದ ಸುಂದರ ನಾಯ್ಕ, ಹರಿಣಿ ಪುರಂದರ, ಪ್ರೇಮಾ ಮಹಾಬಲ ನಾಯ್ಕ, ಮಾಜಿ ಸದಸ್ಯ ಸಂಜೀವ ಗೌಡ ಪರಂಗಾಜೆ, ಉಮೇಶ ಗೌಡ ಸಂಕೇಶ, ಉದ್ಯಮಿ ನೇಮಿಇರಾಜ್ ಎನ್ ಶಾರದಾನಗರ, ಸ್ಥಳೀಯರಾದ ಧರ್ಮಗುರು ಅಬೂಬ್ಕರ್ ಹಾಜಿ ಕುದುಲೂರು, ಇಬ್ರಾಹಿಂ ಹಾಜಿ ಕುದುಲೂರು, ಪುತ್ತುಕುಂಞಿ ಕುದುಲೂರು, ಪ್ರಮುಖರಾದ ಚಂದ್ರಹಾಸ ಗೌಡ ಪರಂಗಾಜೆ, ಖಾದರ್ ಕುದುಲೂರು, ಹೈದರ್ ಕುದುಲೂರು ಮೊದಲಾದವರು ಉಪಸ್ಥಿರಿದ್ದರು. ಬಿಜೆಪಿ ಕೊೖಲ ಗ್ರಾಮ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ ಸ್ವಾಗತಿಸಿ ವಂದಿಸಿದರು.

error: Content is protected !!

Join the Group

Join WhatsApp Group