(ನ್ಯೂಸ್ ಕಡಬ) newskadaba.com ಅ.26. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಇಡ್ಯ ಗ್ರಾಮದ ಸರ್ವೆ.ನಂ.16ಪಿ1 ರಲ್ಲಿ ಜಿ+3 ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಂಕೀರ್ಣ ಯೋಜನೆಗೆ ಆಯ್ಕೆಗೊಂಡಿರುವ ಫಲಾನುಭವಿಗಳಲ್ಲಿ ವಂತಿಗೆ ಪಾವತಿಸದೇ ಇರುವ ಫಲಾನುಭವಿಗಳನ್ನು, ವಸತಿ ಪಡೆಯಲು ಆಸಕ್ತಿ ಇಲ್ಲದ ಫಲಾನುಭವಿಗಳು ಮತ್ತು ದಾಖಲೆಗಳನ್ನು ಸಲ್ಲಿಸಲು ಪ್ರತಿಕ್ರಿಯೆ ಮಾಡದೇ ಇರುವ ಫಲಾನುಭವಿಗಳನ್ನು ರದ್ದು ಪಡಿಸಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವ ಬಗ್ಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನಗರಾಶ್ರಯ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ವಂತಿಗೆ ಪಾವತಿಸದ ಹಾಗೂ ದಾಖಲೆಗಳನ್ನು ಫಲಾನುಭವಿಗಳು, ನವೆಂಬರ್ 30ರೊಳಗೆ ಮಂಗಳೂರು ಮಹಾನಗರ ಪಾಲಿಕೆ ಲಾಲ್ ಭಾಗ್ ಕಛೇರಿಯ ನಗರ ಬಡತನ ನಿರ್ಮೂಲನ ಕೋಶ, ವಸತಿ ವಿಭಾಗದಲ್ಲಿ ಕಛೇರಿ ಅವಧಿಯ ವೇಳೆ ಫಲಾನುಭವಿ ವಂತಿಗೆ ಪಾವತಿಸಿ ಮತ್ತು ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು. ಮೂಲ ಅರ್ಜಿ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ರೂ.60,000 ಕ್ಕೆ ಮೇಲ್ಪಟ್ಟು) ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರ), ಬಾಡಿಗೆ ಕರಾರು ಪತ್ರ, ಫೋಟೋ, ಕೆನರಾ ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್, ವಂತಿಗೆ ವಾವತಿಸಿದ ಬ್ಯಾಂಕ್ ಚಲನ್ ಪ್ರತಿ.
ವಂತಿಗೆ ಪಾವತಿಸದೇ ಇದ್ದಲ್ಲಿ ಮತ್ತು ದಾಖಲೆಗಳನ್ನು ಕಛೇರಿಗೆ ನಿಗದಿತ ಸಮಯದಲ್ಲಿ ಸಲ್ಲಿಸದೇ ಇದ್ದಲಿ ಈಗಾಗಲೇ ಆಯ್ಕೆಗೊಂಡಿರುವ ಫಲಾನುವಿಗಳಿಗೆ ಆಸಕ್ತಿ ಇಲ್ಲವೆಂದು ಪರಿಗಣಿಸಿ ಅವರ ಹೆಸರನ್ನು ಯೋಜನೆಯ ಆಯ್ಕೆ ಪಟ್ಟಿಯಿಂದ ರದ್ದು ಪಡಿಸಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.