(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 22. ಕರ್ನಾಟಕ ರಫ್ತಿನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶನಿವಾರದಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನಿಂದಲೂ ರಾಜ್ಯ ರಫ್ತು ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದು, ಕೌಶಲ್ಯ ತರಬೇತಿಯುಳ್ಳ ಕಾರ್ಮಿಕರಿದ್ದರೆ ಕೈಗಾರಿಕೆಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಾರಂಭಿಸಲಾಗಿತ್ತು. ಈಗ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರ ಈಗಾಗಲೇ 5 ಗ್ಯಾರಂಟಿಗಳನ್ನು ಘೋಷಿಸಿದ್ದು, ಯುವನಿಧಿ ಯೋಜನೆಯಡಿಯಲ್ಲಿ 2022-23 ರಲ್ಲಿ ಪದವೀಧರರಾಗಿ ನಿರುದ್ಯೋಗಿಗಳಾಗಿರುವವರಿಗೆ ಮೂರು ಸಾವಿರ ರೂ.ಗಳ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. ಡಿಪ್ಲೊಮಾ ಹೊಂದಿದವರಿಗೂ 1500 ರೂ.ಗಳ ಭತ್ಯೆಯನ್ನು ನೀಡಲಾಗುವುದು. ಈ ಯೋಜನೆಯು ಬಹುತೇಕ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ ಎಂದರು.